ಮಕ್ಕಳ ಅಪರಣ ಸುಳ್ಳು ವದಂತಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ : ಜಿಲ್ಲಾ ಪೊಲೀಸ್ ಎಚ್ಚರಿಕೆ

ಉಡುಪಿ : ಅಪರಾಧಕ್ಕಿಂತ ಅಪರಾಧಗಳ ಬಗ್ಗೆ ವದಂತಿ, ಸುಳ್ಳು ನಿಯಂತ್ರಣವೇ ಪೊಲೀಸರಿಗೆ ಇತ್ತೀಚಿನ ದಿನಗಳಲ್ಲಿ ಸವಾಲಾಗಿ ಪರಿಣಮಿಸಿದೆ. ದೇಶದಲ್ಲಿ ಕೆಲವು ಸಂಗತಿಗಳು / ಘಟನೆಗಳು ನಡೆದಾಗ ಕೆಲವು ವಿಕೃತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಉಹಾ-ಪೋಹಗಳನ್ನು ಸೃಷ್ಟಿಸಿ, ನಾಗರೀಕ ಸಮಾಜವನ್ನು ಪ್ರಚೋದನೆಗೆ ಒಳಪಡಿಸಿ, ಅನೇಕ ದುರಂತ ಘಟನೆಗಳು ದೇಶದಲ್ಲಿ ನಡೆದು ಹೋಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಅಪಹರಣ ಜಾಲ ಸಕ್ರೀಯವಾಗಿದೆ ಮತ್ತು ಮಕ್ಕಳ ಅಪಹರಣವಾಗುತ್ತಿದೆ ಎಂಬ ವದಂತಿ ಸುದ್ದಿಗಳು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರವಾನೆಯಾಗುತ್ತಿದ್ದು, ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಈ ಕೆಳಕಂಡಂತೆ ಸ್ಪಷ್ಟನೆಯನ್ನು ನೀಡಲಾಗಿದೆ.

ಮಕ್ಕಳ ಅಪಹರಣ ಸಂಬಂಧಿಸಿದಂತೆ ಸುಳ್ಳು ಸಂದೇಶಗಳು ಆಧಾರ ರಹಿತವಾಗಿದ್ದು, ಪ್ರಸ್ತುತ ವರ್ತಮಾನದಲ್ಲಿ ಇಂತಹ ಸುದ್ದಿಗಳಿಗೆ ಸಾರ್ವಜನಿಕರು ಸಮೂಹಸನ್ನೆಗೆ ಒಳಗಾಗಿ ಅಪರಿಚಿತರು, ಅಮಾಯಕರು,  ಆಗಂತಕರ ಜೀವಗಳನ್ನು ಬಲಿತೆಗೆದುಕೊಂಡಿರುವ ಹಲವು ಘಟನೆಗಳು ಈ ದೇಶದಲ್ಲಿ ನಡೆದಿದ್ದು, ಹೈದರಾಬಾದ್‌ನಲ್ಲಿ ಭಿಕ್ಷುಕನೊಬ್ಬನನ್ನು ಮಕ್ಕಳ ಕಳ್ಳನೆಂದು ಹಿಗ್ಗಾ-ಮುಗ್ಗ ತಳಿಸಿದ ಘಟನೆ, ಕೊಪ್ಪಳದ ಕಾರಟಾಗಿಯಲ್ಲಿ ಅಣ್ಣ-ತಂಗಿಯನ್ನು ಮಕ್ಕಳ ಕಳ್ಳರೆಂದು ತಿಳಿದು, ಗ್ರಾಮಸ್ತರ ಗುಂಪೊಂದು ಹಲ್ಲೆ ಮಾಡಿದ ಘಟನೆ,  ಕಲ್ಕತ್ತದಲ್ಲಿ ತೃತಿಯ ಲಿಂಗಿಯೊಬ್ಬಳ ಕೈಯಲ್ಲಿ ಮಗು ಇದ್ದ ವಿಚಾರಕ್ಕೆ ಆಕೆಯನ್ನು ಹತ್ಯೆ ಮಾಡಿದ ಘಟನೆ, ಇನ್ನಿತರ ಘಟನೆಗಳು ನಮ್ಮ ಕಣ್ಣೆದುರಿಗಿದೆ.

ಮಕ್ಕಳ ಕಳ್ಳರ ಬಗ್ಗೆ ಕೆಲವು ನಕಲಿ ಫೋಟೋಗಳನ್ನು ಹಾಕಿ, ಬೇರೆ ಎಲ್ಲಿಯೋ ನಡೆದ ಘಟನೆಯನ್ನು ಇಲ್ಲಿಯೇ ನಡೆದಿದೆ ಎಂಬಂತೆ ಬಿಂಬಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ, ವದಂತಿಗಳನ್ನು ಹಬ್ಬಿಸಿ, ಸಮಾಜದಲ್ಲಿ ಭಯದ ವಾತಾವಣ ಸೃಷ್ಟಿ ಮಾಡಿ, ಸಮಾಜದಲ್ಲಿ ಅಶಾಂತಿಯ ವಾತಾವರಣಕ್ಕೆ ಕಾರಣರಾಗುತ್ತಾರೆ. ಮಕ್ಕಳ ಅಪಹರಣವಾಗಬಹುದು, ನಮ್ಮ ಮಕ್ಕಳನ್ನು ಕದಿಯಬಹುದು ಎಂಬ ಸಾಮಾಜಿಕ ಜಾಲತಾಣದ ಚರ್ಚೆಗಳು ಜನತೆಯ ಮೇಲೆ ಗಾಡ ಪರಿಣಾಮ ಭೀರಿ, ಅದು ನಂತರ ಆಕ್ರೋಶದ ಹಂತಕ್ಕೆ ತಲುಪಿ ಮೇಲಿನಂತೆ ಹಲವು ಘಟನೆಗಳು ನಮ್ಮ ದೇಶದಲ್ಲೆ ನಡೆದಿರುತ್ತದೆ.

ಇತ್ತೀಚಿನ ದಿನಗಳಲ್ಲಿ ಮಕ್ಕಳ ಅಪಹರಣ ಪ್ರಕರಣಗಳು ಮತ್ತು ಮಕ್ಕಳ ಕಳ್ಳರು ಬಂದಿದಾರೆ ಎಂಬ ಸಂದೇಶಗಳನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸುತ್ತಿದ್ದು, ಇಂತಹಾ ಸಂದೇಶ ಒಬ್ಬರಿಂದ ಮತ್ತೊಬ್ಬರಿಗೆ ರವಾನೆಯಾಗಿ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗಿರುವ ನಿದರ್ಶನಗಳು ಸಹಾ ನಮ್ಮೆದುರಿಗಿದೆ.

ಒಂದು ವೇಳೆ ಮಕ್ಕಳ ಅಪಹರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರದೇಶ, ಗ್ರಾಮಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ನಾಗರೀಕರು ಕೂಡಲೇ ಪೊಲೀಸ್ ಕಂಟ್ರೋಲ್ ರೂಮ್ ಹಾಗೂ ಹತ್ತಿರದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಬೇಕು. ಅಪರಿಚಿತರ ಮೇಲೆ ಏಕಾಎಕಿ ಹಲ್ಲೆ, ಕೊಲೆಯತ್ನದಂತಹ ಕೃತ್ಯಗಳಿಗೆ ನಾಗರೀಕರು ಪ್ರಚೋದನೆಗೆ ಒಳಗಾಗಬಾರದು. ಒಂದು ವೇಳೆ ಕಾನೂನನ್ನು ಕೈಗೆತ್ತಿಕೊಂಡರೆ ಅಂತಹಾ ವ್ಯಕ್ತಿಗಳ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು.

ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಯಾವುದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹ ಅನುಮಾನಾಸ್ಪದ ವಿಚಾರಗಳು ಕಂಡು ಬಂದಾಗ ಸದ್ರಿ ಮಾಹಿತಿಯನ್ನು ಬೀಟ್ ಸಿಬ್ಬಂದಿಯವರಿಗಾಗಲೀ / ಪೊಲೀಸ್ ಠಾಣೆಗಾಗಲೀ / ಜಿಲ್ಲಾ ಕಂಟ್ರೋಲ್ ರೂಮ್ ಫೋನ್ ನಂಬ್ರ 0820-2526444 ಅಥವಾ 100 ಕ್ಕಾಗಲಿ ಮಾಹಿತಿಯನ್ನು ನೀಡಿ, ಸಂಭವನೀಯ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬಹುದಾಗಿದೆ.

ಕೆಲವೊಂದು ದುಷ್ಕರ್ಮಿಗಳು ವಿದೇಶದಲ್ಲಿ ಕುಳಿತುಕೊಂಡು, ಭಾರತ ದೇಶದ ಸ್ವಾಸ್ಥ್ಯ ಹಾಳು ಮಾಡುವ ದೃಷ್ಟಿಯಿಂದ, ವಿದೇಶದಲ್ಲಿ ನಡೆದಿರುವ ಕೆಲವೊಂದು ಸುದ್ದಿಗಳನ್ನು ಭಾರತದಲ್ಲಿ ನಡೆದಿದೆ ಎಂದು ಬಿಂಬಿಸಿ, ಘಟನೆಗೆ ಸಂಬಂಧವೇ ಇಲ್ಲದ ಸಂದೇಶ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸರಿಸುತ್ತಿದ್ದು, ಇಂತಹಾ ಸಂದೇಶ/ಫೋಟೋಗಳಿಗೆ ಸ್ಪಂದಿಸದಿರಲು ಈ ಮೂಲಕ ಸೂಚಿಸಲಾಗಿದೆ.

ಮಕ್ಕಳ ಅಪಹರಣ ಪ್ರಕರಣಗಳಿಗೆ ಸಂಬಂಧಿಸಿದ ಯಾವುದೇ ಸುಳ್ಳು ಸುದ್ದಿ/ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ/ ಪ್ರಸರಿಸುವ/ ಫಾರ್‌ವರ್ಡ್ ಮಾಡುವ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ಒದಗಿಸುವಂತೆ ಈ ಮೂಲಕ ಸೂಚಿಸಲಾಗಿದೆ. ಅಂತಹ ವ್ಯಕ್ತಿಗಳ ವಿರುದ್ದ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲುಮಾಡಿಕೊಳ್ಳಲಾಗುವುದು.

ಮಕ್ಕಳ ಕಳ್ಳತನದ ಬಗ್ಗೆ ಯಾರೂ ಕೂಡಾ ಇಂತಹ ಸಂದೇಶಗಳನ್ನು ಹರಿಯಬಿಡಬಾರದು. ಹಾಗೊಂದು ವೇಳೆ ಇಂತಹ ಸಂದೇಶಗಳು ಬೇರೆಡೆಯಿಂದ ಬಂದಲ್ಲಿ, ಉಹಾ-ಪೋಹಗಳು ಹುಟ್ಟಿಕೊಳ್ಳುವ ಮೊದಲೇ ಅದನ್ನು ಚಿವುಟಿ ಹಾಕಬೇಕು. ಇದರಿಂದ ಎಷ್ಟೋ ಅನಾಹುತಗಳು ತಪ್ಪುತ್ತದೆ. ಈ ಬಗ್ಗೆ ನಾಗರೀಕ ಸಮಾಜ ಯಾವುದೇ ಉದಾಸೀನ ತೋರಬಾರದು.

ಮಕ್ಕಳ ಹಕ್ಕುಗಳ ವಿಚಾರದಲ್ಲಿ ಪೊಲೀಸ್ ಇಲಾಖೆ ವಿಶೇಷ ಮುರ್ತುವರ್ಜಿ ವಹಿಸಿದ್ದು, ಒಂದು ವೇಳೆ ಇಂತಹಾ ಘಟನೆಗಳು ನಡೆದ ಪಕ್ಷದಲ್ಲಿ ಕೂಡಲೇ ತನಿಖೆ ಕೈಗೊಂಡು ಪ್ರಕರಣವನ್ನು ಭೇದಿಸಿ, ನಾಗರೀಕರ ಜೊತೆ ಪೊಲೀಸ್ ಇಲಾಖೆ ಸದಾ ಸಿದ್ದವಿದೆ ಎಂಬ ಸ್ಪಷ್ಟ ಸಂದೇಶವನ್ನು ಈ ಮೂಲಕ ನಾಗರೀಕರಿಗೆ ತಿಳಿಸಲಾಗಿದೆ.  ಹೆಚ್ಚಿನ ಮಾಹಿತಿಗಾಗಿ ಉಡುಪಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ ನಂಬ್ರ 0820-2526444  / 100 ಅಥವಾ ಸೈಬರ್ ಅಪರಾಧ ಪೊಲೀಸ್ ಠಾಣೆ, ಉಡುಪಿ.  ೦೮೨೦-೨೫೩೦೦೨೧ನ್ನು ಸಂಪರ್ಕಿಸಲು ಸಾರ್ವಜನಿಕರಿಗೆ ಈ ಮೂಲಕ ಸೂಚಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!