ಬುಲ್‌ಟ್ರಾಲ್ ಮತ್ತು ಲೈಟ್ ಫಿಶಿಂಗ್ ವಿರುದ್ಧ ಕಠಿಣ ಕ್ರಮ:ಕೋಟ
ಮಂಗಳೂರು: ಬುಲ್‌ಟ್ರಾಲ್ ಮತ್ತು ಲೈಟ್ ಫಿಶಿಂಗ್‌ನಲ್ಲಿ ನಿರತರಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ, ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬುಲ್‌ಟ್ರಾಲ್ ಮತ್ತು ಲೈಟ್ ಫಿಶಿಂಗ್ ನಿಷೇಧಿಸಲಾಗಿದೆ. ಇದು ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.
ಕೆಲ ಮೀನುಗಾರರು ಈಗಲೂ ಬುಲ್‌ಟ್ರಾಲ್ ಮತ್ತು ಲೈಟ್ ಫಿಶಿಂಗ್‌ನಲ್ಲಿ ನಿರತರಾಗಿದ್ದಾರೆ. ಇದರಿಂದ ಸಾಂಪ್ರದಾಯಿಕ ಮೀನುಗಾರರಿಗೆ ಹೊಡೆತ ಬೀಳಲಿದೆ. ಸಾಂಪ್ರದಾಯಿಕ ಮೀನುಗಾರರ ಸಂಘದಿಂದ ಈಗಾಗಲೇ ಮನವಿ ನೀಡಿದ್ದಾರೆ. ಅದಕ್ಕೆ ಅನುಗುಣವಾಗಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಆತಂಕ ಬೇಡ: ಪ್ರವಾಹದಲ್ಲಿ ಮನೆ, ಬೆಳೆ ಕಳೆದುಕೊಂಡಿರುವ ಸಂತ್ರಸ್ತರು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ. ರಾಜ್ಯ ಸರ್ಕಾರ ಅಗತ್ಯ ಪರಿಹಾರ ಒದಗಿಸಲು ಬದ್ಧವಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಮನೆ ಕಳೆದುಕೊಂಡವರಿಗೆ ತಲಾ ₹5 ಲಕ್ಷ ಒದಗಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ. ಅದರಂತೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮನೆ ಕಳೆದುಕೊಂಡವರಿಗೆ ₹5 ಲಕ್ಷ ಪರಿಹಾರವನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಎಲ್ಲ ಸಂತ್ರಸ್ತರಿಗೂ ಪರಿಹಾರ ದೊರೆಯಲಿದೆ ಎಂದರು. ಪ್ರವಾಹದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಕೃಷಿ ಜಮೀನಿನಲ್ಲಿ ಮಣ್ಣು ಆವರಿಸಿದೆ. ಈ ಮಣ್ಣನ್ನು ತೆರವುಗೊಳಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು