ಆರೋಗ್ಯದ ಹಿತದೃಷ್ಟಿಯಿಂದ ಮದ್ಯಪಾನ ನಿಲ್ಲಿಸಿ: ಜಿಲ್ಲಾಧಿಕಾರಿ

ಉಡುಪಿ:‌ ಸರ್ಕಾರಕ್ಕೆ ಬರುವ ಅಬಕಾರಿ ಆದಾಯ ನಿಂತರೂ ಪರವಾಗಿಲ್ಲ ಆರೋಗ್ಯದ ಹಿತದೃಷ್ಟಿಯಿಂದ ಮದ್ಯಪಾನ ಸೇವನೆಯನ್ನು ನಿಲ್ಲಿಸಿ ಎಂದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಕಿವಿಮಾತು ಹೇಳಿದರು.

ಡಾ.ಎ.ವಿ.ಬಾಳಿಗಾ ಮೆಮೊರಿಯಲ್ ಆಸ್ಪತ್ರೆಯಲ್ಲಿ ಬುಧವಾರ ನಡೆದ ಮದ್ಯವರ್ಜನೆ ಶಿಬಿರದಲ್ಲಿ ಮಾತನಾಡಿದ ಅವರು, ಸರ್ಕಾರದ ಬೊಕ್ಕಸಕ್ಕೆ ಪ್ರತಿವರ್ಷ ₹ 23,000 ಕೋಟಿ ಅಬಕಾರಿ ಆದಾಯ ಬರುತ್ತಿದೆ. ಜಿಲ್ಲೆಯಿಂದ ₹ 1,000 ಕೋಟಿ ಆದಾಯ ಹೋಗುತ್ತಿದೆ. ಈ ಹಣ ಅಭಿವೃದ್ಧಿಗೆ ಬಳಕೆಯಾದರೆ ಜಿಲ್ಲೆಯ ಆರ್ಥಿಕ ಚಿತ್ರಣವೇ ಬದಲಾಗಲಿದೆ ಎಂದರು.

‘ರಾಜ್ಯ ಸರ್ಕಾರದ ಬಜೆಟ್‌ ಗಾತ್ರ ₹ 2 ಲಕ್ಷ ಕೋಟಿಯಷ್ಟಿದ್ದು, ಅಬಕಾರಿ ಆದಾಯ ನಿಂತರೂ ಸರ್ಕಾರ ಇತರೆ ಮೂಲಗಳಿಂದ ತೆರಿಗೆ ಸಂಗ್ರಹಿಸಿ ರಾಜ್ಯವನ್ನು ಮುನ್ನಡೆಸುತ್ತದೆ. ಆದರೆ, ಮದ್ಯಪಾನ ಮಾಡುವುದು ಬೇಡ’  ಎಂದು ಹೇಳಿದರು.

‘ಮದ್ಯದಂಗಡಿಗಗಳಿಗೆ ಪರವಾನಗಿ, ಮದ್ಯ ಮಾರಾಟ ಗುರಿ ನಿಗಧಿ ಸೇರಿದಂತೆ ಅಬಕಾರಿ ಇಲಾಖೆಗೆ ಸಂಬಂಧಿದ ವಿಚಾರಗಳು ಜಿಲ್ಲಾಡಳಿತದ ವ್ಯಾಪ್ತಿಗೆ ಬರುತ್ತದೆ. ಆರೋಗ್ಯದ ದೃಷ್ಟಿಯಿಂದ ಮದ್ಯ ಮಾರಾಟ ಗುರಿಯನ್ನು ಕಡಿಮೆ ಮಾಡುವ ಬಗ್ಗೆ ಚಿಂತಿಸುತ್ತೇನೆ’ ಎಂದರು.

ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ವಿಶ್ವದೆಲ್ಲೆಡೆ ಪ್ರತಿ ನಿಮಿಷಕ್ಕೆ 6 ಮದ್ಯಪಾನಿಗಳು ಮೃತಪಡುತ್ತಿದ್ದಾರೆ. ಶೇ 18ರಷ್ಟು ಆತ್ಮಹತ್ಯೆಗಳಿಗೆ, ಶೇ 13ರಷ್ಟು ಮೂರ್ಚೆ ರೋಗಗಳಿಗೆ, ಶೇ 27ರಷ್ಟು ಅಪಘಾತಗಳಿಗೆ, ಶೇ 18ರಷ್ಟು ದೊಂಬಿ ಗಲಾಟೆಗಳಿಗೆ ಮದ್ಯಪಾನ ಕಾರಣವಾಗಿದೆ ಎಂದು ಸಂಶೋಧನೆ ಹೇಳುತ್ತಿದೆ ಎಂದು ಮನೋವೈದ್ಯ ಡಾ.ಪಿ.ವಿ.ಭಂಡಾರಿ ಹೇಳಿದರು.

ಇಷ್ಟಾದರೂ ಜನರು ಸರ್ವರೋಗಕ್ಕೆ ಸಾರಾಯಿ ಮದ್ದು ಎಂದು ಸೇವಿಸುತ್ತಲೇ ಇದ್ದಾರೆ. ಒಂದು ಹನಿ ಮದ್ಯವೂ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಮದ್ಯ ಸೇವನೆ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆಗಳನ್ನು ತುಂಬಲಾಗುತ್ತಿದೆ. ಮದ್ಯ ಸೇವನೆ ಅಪಾಯಗಳ ವಿರುದ್ಧ ಅರಿವು ಮೂಡಿಸಬೇಕಿದೆ ಎಂದರು.

ಮದ್ಯಪಾನ ಬಿಟ್ಟವರು ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸುತ್ತಿದ್ದಾರೆ. ಜತೆಗೆ, ಮದ್ಯಪಾನ ತ್ಯಜಿಸುವ ಕುರಿತು ಸಮಾಜದಲ್ಲಿ ಅರಿವು ಮೂಡಿಸುತ್ತಿದ್ದಾರೆ. ಇದು ಸಮಾಜಕ್ಕೆ ಪ್ರೇರಣದಾಯಕ ಎಂದರು

Leave a Reply

Your email address will not be published. Required fields are marked *

error: Content is protected !!