ಆರ್ಥಿಕ ದಿಗ್ಭಂಧನ: ಷೇರು ಮಾರುಕಟ್ಟೆ ಎರಡನೇ ದಾಖಲೆ ಮಟ್ಟದ ದಿನವೂ ಕುಸಿತ!
ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಯಸ್ ಬ್ಯಾಂಕಿನ ಮೇಲೆ ಆರ್ಥಿಕ ದಿಗ್ಭಂಧನ ಹೇರಿದ ನಂತರ ಸೋಮವಾರ ಷೇರುಪೇಟೆ ವಹಿವಾಟು ಆರಂಭ ದಿನ ಸೆನ್ಸೆಕ್ಸ್ ಕುಸಿತ ಕಂಡುಬಂದಿದೆ.ಕೊರೊನಾ ವೈರಸ್ ಸೋಂಕು ಮತ್ತು ಕಚ್ಚಾತೈಲ ಬೆಲೆಯಲ್ಲಿ ಇಳಿಕೆ ಕೂಡ ಇದಕ್ಕೆ ಕಾರಣವಾಗಿದೆ. ಜಾಗತಿಕ ಕಚ್ಚಾ ಮಾರುಕಟ್ಟೆಯಲ್ಲಿ ತೈಲ ಬೆಲೆ ಶೇಕಡಾ 30ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರಲ್ ಗೆ 32.11 ಡಾಲರ್ ಆಗಿದೆ.
ಇನ್ನು ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಇಂದು ಬೆಳಗ್ಗೆ ವಹಿವಾಟು ಆರಂಭವಾದ ನಂತರ 1629.01ರಷ್ಟು ಕುಸಿತ ಕಂಡುಬಂದು 36 ಸಾವಿರದ 061.61ರಲ್ಲಿ ವಹಿವಾಟು ನಡೆಸುತ್ತಿತ್ತು. ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ 465.05ರಷ್ಟು ಕುಸಿತ ಕಂಡು 10 ಸಾವಿರದ 572.40ರಲ್ಲಿ ವಹಿವಾಟು ನಡೆಸಿದೆ.
ಇನ್ನೊಂದೆಡೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಗಳನ್ನು 3 ಸಾವಿರದ 594.84 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದು, ದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಗಳನ್ನು 2 ಸಾವಿರದ 543.78 ಕೋಟಿ ಬೆಲೆಗೆ ಕಳೆದ ಶುಕ್ರವಾರ ಖರೀದಿ ಮಾಡಿದ್ದಾರೆ ಎಂದು ಷೇರು ವಿನಿಮಯ ಕೇಂದ್ರ ತಿಳಿಸಿದೆ.
ವಿದೇಶಿ ಹಣದ ಹೊರಹರಿವು, ಜಾಗತಿಕ ಕಚ್ಚಾ ತೈಲ ಬೆಲೆ ಕುಸಿತ ಮತ್ತು ಭಾರತದಲ್ಲಿ ಯಸ್ ಬ್ಯಾಂಕಿನ ಆರ್ಥಿಕ ಬಿಕ್ಕಟ್ಟು ಹೂಡಿಕೆದಾರರನ್ನು ಹಿಂದೇಟು ಹಾಕುವಂತೆ ಮಾಡಿದೆ. ಇಂದು ಬೆಳಗ್ಗೆ ಡಾಲರ್ ಎದುರು ಭಾರತ ರೂಪಾಯಿ ಮೌಲ್ಯ 73 ರೂಪಾಯಿ 89 ಪೈಸೆಯಷ್ಟಾಗಿತ್ತು.