ಶ್ರೀರಾಮುಲು ಕಬಡ್ಡಿ ಆಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಬಳ್ಳಾರಿ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಒಬ್ಬಂಟಿಯಾಗಿ ಪ್ರವಾಹಕ್ಕೀಡಾದ ಪ್ರದೇಶಗಳಿಗೆ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದರೆ ಅತ್ತ ಬಿಜೆಪಿ ಶಾಸಕ ಶ್ರೀರಾಮುಲು ಅವರು ಕಬಡ್ಡಿ ಆಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಳ್ಳಾರಿಯ ಗಾಂಧಿ ಭವನದಲ್ಲಿ ಶನಿವಾರ ಸಂಜೆ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಅವರು ಕಬಡ್ಡಿ ಆಡುವುದರಲ್ಲಿ ನಿರತರಾಗಿದ್ದರು. ಇದು ಜನತೆಯ ಆಕ್ರೋಶಕ್ಕೆ ಕಾರಣವಾಗಿತ್ತು.

ರಾಜ್ಯ ಸಂಕಷ್ಟದಲ್ಲಿ ಸಿಲುಕಿರುವಾಗ ಶಾಸಕರಿಗೆ ಅದರ ಅರಿವೇ ಇಲ್ಲದಂತಾಗಿದೆ. ರಾಜ್ಯವೇ ಕಂಬನಿ ಮಿಡಿಯುತ್ತಿದ್ದರೂ ಕೆಲ ಶಾಸಕರು ಮಾತ್ರ ಪರಿಹಾರ ಕಾರ್ಯದಲ್ಲಿ ಭಾಗಿಯಾಗುತ್ತಿಲ್ಲ ಎಂಬ ಟೀಕೆ ವ್ಯಕ್ತವಾಗುತ್ತಿದೆ.

ಈ ಬಗ್ಗೆ ಮಾತನಾಡಿದ ಶ್ರೀರಾಮುಲು ಅವರು ನಾಳೆಯಿಂದ ನೆರೆ ಪ್ರವಾಸಕ್ಕೆ ಹೊರಡುತ್ತೇನೆ. ನಾನು ಕಬಡ್ಡಿ ಆಡಿರುವುದು ಬೇರೆ ಉದ್ದೇಶದಿಂದಲ್ಲ, ಮಕ್ಕಳು ಹಠ ಮಾಡಿದ್ದರಿಂದ ಕಬಡ್ಡಿ ಆಡಿದೆ. ಇದು ಪೂರ್ವನಿಯೋಜಿತ ಕಾರ್ಯಕ್ರಮವಾಗಿತ್ತು. ಹೀಗಾಗಿ ಭಾಗವಹಿಸಿದ್ದೆ ಎಂದು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *

error: Content is protected !!