ಶ್ರೀಲಂಕಾ ಪ್ರಧಾನಿ ಪತ್ನಿ ಸಮೇತ ಕೊಲ್ಲೂರಿನ ಮೂಕಾಂಬಿಕಾ ದೇವಿಯ ದರ್ಶನ
ಉಡುಪಿ: ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಪತ್ನಿಯ ಸಮೇತ ಶುಕ್ರವಾರ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಬೆಳಿಗ್ಗೆ 11.40ರ ಸುಮಾರಿಗೆ ದೇಗುಲಕ್ಕೆ ಬಂದ ಶ್ರೀಲಂಕಾ ಪ್ರಧಾನಿಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಿಂದ ಸ್ವಾಗತ ಕೋರಲಾಯಿತು. ಬಳಿಕ, ದೇವರ ದರ್ಶನ ಪಡೆದು ಪ್ರಾರ್ಥಿಸಿ, ನವಚಂಡಿಕ ಯಾಗದಲ್ಲಿ ಭಾಗಿಯಾದರು. ನಂತರ ಮಹಾಪೂಜೆಯನ್ನು ಪೂರೈಸಿ ಪ್ರಸಾದ ಸ್ವೀಕರಿಸಿ ಮರಳಿದರು ಎಂದು ದೇಗುಲದ ಅರ್ಚಕರಾದ ಡಾ.ನರಸಿಂಹ ಅಡಿಗ ತಿಳಿಸಿದರು.
ಶ್ರೀಲಂಕಾ ದೇಶ ಅಭಿವೃದ್ಧಿಯಾಗಬೇಕು, ರಾಜಕೀಯ ತೊಂದರೆಗಳು ಎದುರಾಗಬಾರದು, ವೈಯಕ್ತಿಕವಾಗಿ ರಾಜಕೀಯ ಏಳ್ಗೆಯಾಗಬೇಕು ಎಂದು ದೇವರಲ್ಲಿ ಸಂಕಲ್ಪ ಮಾಡಿಕೊಂಡರು ಎಂದು ಅರ್ಚಕರು ತಿಳಿಸಿದರು.
ಕಳೆದ ಬಾರಿ ಕ್ಷೇತ್ರಕ್ಕೆ ಬಂದಾಗ ದೇವರಲ್ಲಿ ಹರಕೆ ಹೊತ್ತಿದ್ದರು. ಹರಕೆ ಈಡೇರಿದರೆ ಮತ್ತೊಮ್ಮೆ ಕ್ಷೇತ್ರಕ್ಕೆ ಬರುವುದಾಗಿ ತಿಳಿಸಿದ್ದರು. ಅದರಂತೆ, ಬಂದು ದೇವಿಯ ದರ್ಶನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಕೊಲ್ಲೂರು ಮೂಕಾಂಬಿಕಾ ಕ್ಷೇತ್ರವು ಅಷ್ಟಾದಶ ಮುಕ್ತಿಪೀಠಗಳಲ್ಲಿ ಶಕ್ತಿಪೀಠವಾಗಿದೆ. ಹಾಗೆಯೇ ಶ್ರೀಲಂಕಾದಲ್ಲಿ ಶಾಂತರಿದೇವಿಯ ದೇವಸ್ಥಾನ ಕೂಡ ಶಕ್ತಿಪೀಠವಾಗಿ ಗುರುತಿಸಿಕೊಂಡಿದೆ. ಭಾರತ ಹಾಗೂ ಶ್ರೀಲಂಕಾ ನಡುವೆ ಹಿಂದಿನಿಂದಲೂ ಧಾರ್ಮಿಕ ಸಂಬಂಧವಿದೆ ಎಂದು ಅಡಿಗರು ತಿಳಿಸಿದರು.
ಗುರುವಾರ ವಿಕ್ರಮಸಿಂಘೆ ಅವರ ಹೆಸರಿನಲ್ಲಿ ಪಾರಾಯಣ, ಕಲಶ ಸ್ಥಾಪನೆ ನಡೆದಿತ್ತು. ಬೆಳಿಗ್ಗೆ 8ರಿಂದ ನವಚಂಡಿ ಹೋಮ ಆರಂಭವಾಗಿ, ಮಧ್ಯಾಹ್ನ ಪೂರ್ಣಾಹುತಿಯಾಯಿತು ಎಂದು ಮಾಹಿತಿ ನೀಡಿದರು.
ಅಘೋಷಿತ ಬಂದ್ ವಾತಾವರಣ: ಶ್ರೀಲಂಕಾ ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಮುತ್ತಲೂ ಅಘೋಷಿತ ಬಂದ್ ವಾತಾವರಣ ಇತ್ತು. ಪೇಟೆಯ ಅಂಗಡಿಗಳನ್ನು ಮುಚ್ಚಿಸಲಾಗಿತ್ತು. ದೇವಸ್ಥಾನಕ್ಕೆ ಪ್ರವೇಶ ನಿರ್ಬಂಧಿಸಲಾಗಿತ್ತು. ಮಾದ್ಯಮ ಪ್ರತಿನಿಧಿಗಳಿಗೂ ಛಾಯಾಚಿತ್ರ ತೆಗೆಯಲು ಅವಕಾಶ ನೀಡಲಿಲ್ಲ.
‘ಜ್ಯೋತಿಷಿಯ ಸಲಹೆ’
ಕೇರಳದ ಜ್ಯೋಷಿಯೊಬ್ಬರು ಕೊಲ್ಲೂರಿನಲ್ಲಿ ಚಂಡಿಕಾಹೋಮ ಮಾಡಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ. ರಾಜಕೀಯ ಜೀವನದಲ್ಲಿ ಏಳ್ಗೆಯಾಗುತ್ತದೆ ಎಂದು ಸಲಹೆ ನೀಡಿದ್ದರು. ಅದರಂತೆ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಮೂಕಾಂಬಿಕಾ ಸನ್ನಿಧಿಯಲ್ಲಿ ನವಚಂಡಿಕಾ ಹೋಮ ಮಾಡಿಸಿದ್ದಾರೆ. ಹಿಂದೆಯೂ ಶ್ರೀಲಂಕಾ ಪ್ರಧಾನಿ ಕೊಲ್ಲೂರಿಗೆ ಭೇಟಿನೀಡಿದ್ದರು ಎಂದು ದೇವಸ್ಥಾನದ ಧರ್ಮದರ್ಶಿ ಜಯರಾಮ ಶೆಟ್ಟಿ ತಿಳಿಸಿದರು.
‘ಮಳೆ ಅಡ್ಡಿ: ರಸ್ತೆಮಾರ್ಗವಾಗಿ ಕೊಲ್ಲೂರಿಗೆ’
ಶ್ರೀಲಂಕಾ ಪ್ರಧಾನಿ ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಬಿರುಸಿನ ಮಳೆ ಸುರಿಯುತ್ತಿತ್ತು. ಹಾಗಾಗಿ, ಮಂಗಳೂರಿನಿಂದ ಕೊಲ್ಲೂರಿಗೆ ಹೆಲಿಕಾಪ್ಟರ್‌ನಲ್ಲಿ ತೆರಳಲು ಸಾಧ್ಯವಾಗಲಿಲ್ಲ ಬದಲಾಗಿ ರಸ್ತೆ ಮಾರ್ಗವಾಗಿ ಅವರನ್ನು ಕರೆತರಲಾಯಿತು.
ನೆರೆಯ ರಾಜ್ಯದ ಕೇರಳ ,ತಮಿಳುನಾಡು ಭಕ್ತರು ಪ್ರಧಾನಿ ಭೇಟಿಯ ಮಾಹಿತಿ ಇಲ್ಲದೆ ದೇವರ ದರ್ಶನಕ್ಕಾಗಿ ಮಳೆಯ ನಡುವೆ ಪರದಾಡಬೇಕಾಯಿತು .