ಅಷ್ಟ ಮಠದ ಹಿರಿಯ ಯತಿ ಪೇಜಾವರ ಶ್ರೀ ಕೃಷ್ಣೈಕ್ಯ
ಉಡುಪಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಪೇಜಾವರ ಅಧೋಕ್ಷಜ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ನಿಧನರಾಗಿದ್ದಾರೆ ಎಂದು ಪೇಜಾವರ ಮಠ ಮುಂಜಾನೆ 9.20ಕ್ಕೆ ಘೋಷಣೆ ಮಾಡಿತು. ಭಕ್ತರು ‘ವಿಶ್ವೇಶ ತೀರ್ಥ ಸ್ವಾಮೀಜಿಗೆ ಗೋವಿಂದ’ ಎಂದು ಗೋವಿಂದ ನಾಮ ಮೊಳಗಿಸಿದರು.
ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸ್ವಾಮೀಜಿ ಆಶಯದಂತೆ ಬೆಂಗಳೂರಿನ ವಿದ್ಯಾಪೀಠದಲ್ಲಿ ಬೃಂದಾವನ ನಿರ್ಮಿಸಲಾಗುವುದು ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಬೆಂಗಳೂರಿಗೆ ಏರ್‌ಲಿಫ್ಟ್ ಮೂಲಕ ಸ್ವಾಮೀಜಿ ಪಾರ್ಥಿವ ಶರೀರ ತರಲಾಗುವುದು. ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಅಂತಿಮ ದರ್ಶನಕ್ಕೆ ಸರ್ಕಾರ ವ್ಯವಸ್ಥೆ ಮಾಡಿದೆ.
ಮಠದ ಆವರಣದಲ್ಲಿ ಉಡುಪಿ ಅಷ್ಟಮಠಗಳ ಭಕ್ತರು ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರು. ವಿಶ್ವೇಶ ತೀರ್ಥರ ಪೂರ್ವಾಶ್ರಮದ ತಂಗಿ ವಾಸಂತಿಯವರು ಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ದರ್ಶನ ಪಡೆದರು. ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಪೇಜಾವರ ಮಠಕ್ಕೆ ಭೇಟಿ ನೀಡಿ, ಸ್ವಾಮೀಜಿ ದರ್ಶನ ಪಡೆದರು.