ರಾಜ್ಯಕ್ಕೆ ಸಮರ್ಥ ಆಡಳಿತ ಶ್ರೀ ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ.

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಅಧಿಕಾರದ ಸೂತ್ರ ಹಿಡಿದ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಸುಭದ್ರ ಮತ್ತು ಸಮೃದ್ಧ ಆಡಳಿತ ನೀಡಲಿದೆ ಎಂದು ಮಾಜಿ ಮಂತ್ರಿ, ಮೇಲ್ಮನೆಯ ಶಾಸಕ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಪೂಜಾರಿಯವರು, ಪ್ರಮಾಣ ವಚನ ಸ್ವೀಕರಿಸಿದ ತಕ್ಷಣವೇ ಯಡಿಯೂರಪ್ಪನವರು ಪ್ರಥಮ ಸಂಪುಟ ಸಭೆಯಲ್ಲಿ, ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ಯೋಜನೆಗೆ ಪೂರಕವಾಗಿ ವಾರ್ಷಿಕ 4 ಸಾವಿರ ಹೆಚ್ಚುವರಿ ಹಣ ಪಾವತಿ ಯೋಜನೆ ರೂಪಿಸಿದ್ದು, ಇದರಿಂದಾಗಿ ಕರ್ನಾಟಕ ರಾಜ್ಯದ 87 ಲಕ್ಷ ಕುಟುಂಬಗಳಿಗೆ ಆರ್ಥಿಕ ಶಕ್ತಿ ನೀಡಿದಂತಾಗುತ್ತದೆ. ಈ ಯೋಜನೆಯಿಂದ ರಾಜ್ಯ ಸರಕಾರಕ್ಕೆ ವಾರ್ಷಿಕ 35 ಸಾವಿರ ಕೋಟಿ ರೂಪಾಯಿ ಹೆಚ್ಚು ವೆಚ್ಚ ಬರಲಿದೆ ಮಾತ್ರವಲ್ಲ, ಪ್ರಥಮ ಬಾರಿಗೆ ಬಡವರಾದ ನೇಕಾರರಿಗೆ ಸಾಲಮನ್ನಕ್ಕಾಗಿ 100 ಕೋಟಿ ರೂಪಾಯಿ ತೆಗೆದಿರಿಸಿದ್ದು, ದುಡಿದುಣ್ಣುವವರಿಗೆ ಹೆಚ್ಚು ಶಕ್ತಿ ಕೊಟ್ಟಂತ್ತಾಗಿದೆ. ಒಟ್ಟಾರೆ ಯಡಿಯೂರಪ್ಪನವರ ನೇತೃತ್ವದ ಸರಕಾರದಲ್ಲಿ ಯಾವುದೇ ರಾಗದ್ವೇಶಗಳಿಲ್ಲದೆ ಸಮೃದ್ಧ ಆಡಳಿತವನ್ನು ರಾಜ್ಯದ ಜನತೆ ನಿರೀಕ್ಷಿಸ ಬಹುದಾಗಿದೆ.

ನೆನಗುದಿಗೆ ಬಿದ್ದಿರುವ ಹಲವಾರು ನೀರಾವರಿ ಯೋಜನೆಗಳು, ಬರಗಾಲ ಪೀಡಿತ ತಾಲೂಕುಗಳಿಗೆ ಹೆಚ್ಚು ಗಮನ ನೀಡಲು ಸರಕಾರ ಇಚ್ಚಿಸಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರು, ರಸ್ತೆಗಳೂ ಸೇರಿದಂತೆ, ಮೂಲಭೂತ ಸೌಕರ್ಯಗಳು, ಬಡವರ ಮನೆ, ಕರಾವಳಿ ಪ್ರದೇಶದ ಮೀನುಗಾರಿಕೆಗೆ ಸಂಬಂಧಪಟ್ಟ ಬಂದರುಗಳು, ಜಟ್ಟಿಗಳ ನಿರ್ಮಾಣ, ಹಿಂದುಳಿದ ವರ್ಗಗಳು ಹಾಗೂ ಪರಿಶಿಷ್ಟ ಜಾತಿ, ಪಂಗಡಗಳಿಗೆ ಬೇಕಾದ ಮೂಲಭೂತ ಸವಲತ್ತುಗಳೂ ಸೇರಿದಂತೆ, ಅನೇಕ ಜನಪರ ಯೋಜನೆಗಳನ್ನು ಸರಕಾರದಿಂದ ನಿರೀಕ್ಷಿಸ ಬಹುದಾಗಿದೆ.

ಡೀಮ್ಡ್ ಪಾರೆಸ್ಟ್ ಹೆಸರಿನಲ್ಲಿ ಕಡು ಬಡವರಿಗೆ ಹಕ್ಕು ಪತ್ರಗಳನ್ನು ನೀಡಲು ಇರುವ ಗೊಂದಲದ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆಯಲಿದ್ದೇವೆ. ರಾಜ್ಯದ ಜನತೆಯ ಹಂಬಲಕ್ಕೆ ಒತ್ತುಕೊಟ್ಟು, ಬಿಜೆಪಿಯ ಕೈಗೆ ಸಿಕ್ಕಿರುವ ಅಧಿಕಾರವನ್ನು ಜನಸಾಮಾನ್ಯರ ಬದುಕು ಬಲಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪನವರು ಮತ್ತು ತಂಡ ಶ್ರಮವಹಿಸಿ ದುಡಿಯಲಿದೆ ಎಂದು ಕೋಟ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!