ಜುಲೈ 21: ಭುವನೇಂದ್ರ ಕಿದಿಯೂರು “ರತ್ನೋತ್ಸವ ಅಭಿನಂದನಾ ಸಮಾರಂಭ”

ಉದ್ಯಮಿ, ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಶ್ರೀ ಭುವನೇಂದ್ರ ಕಿದಿಯೂರರ 75 ರ ಸಂಭ್ರಮ ಮತ್ತು ರತ್ನೋತ್ಸವ-ಅಭಿನಂದನ ಕಾರ್ಯಕ್ರಮ 21-07-2019 ಭಾನುವಾರ ಬೆಳಗ್ಗೆ 9 ಗಂಟೆಯಿಂದ 1 ಗಂಟೆಯ ವರೆಗೆ ಶ್ಯಾಮಿಲಿ ಸಭಾಭವನ , ಅಂಬಲಪಾಡಿ, ಉಡುಪಿಯಲ್ಲಿ ಜರಗಲಿದೆ ಎಂದು ಅಭಿನಂದನ ಸಮಾರಂಭದ ಉಪಾದ್ಯಕ್ಷ, ಉದ್ಯಮಿ ಹರಿಯಪ್ಪ ಕೋಟ್ಯಾನ್ ಪತ್ರಿಕಾಗೋಷ್ಠೀಯಲ್ಲಿ ತಿಳಿಸಿದರು.

ಉಡುಪಿ ಶ್ರೀಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು,  ಶ್ರೀಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶ್ರೀಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಅನುಗ್ರಹ ಸಂದೇಶವನ್ನು ನೀಡಲಿದ್ದಾರೆ.

ಡಾ. ಎಚ್. ಎಸ್ ಬಲ್ಲಾಳರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಶ್ರೀ ಡಿ.ವಿ. ಸದಾನಂದ ಗೌಡರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ರೆ. ಫಾ. ವಲೇರಿಯನ್ ಮೆಂಡೊನ್ಸ ರವರು ಶುಭಾಶಂಸನೆ ಗೈಯಲಿದ್ದಾರೆ. ಹಿರಿಯ ಜ್ಯೋತಿಷ್ಯ ವಿದ್ವಾಂಸರಾದ ಶ್ರೀ ಕಬಿಯಾಡಿ ಜಯರಾಮ ಆಚಾರ್ಯರು ಅಭಿನಂದನ ಮಾತುಗಳನ್ನಾಡಲಿದ್ದಾರೆ. ಲೋಕಸಭಾ ಸದಸ್ಯರಾದ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಶಾಸಕರುಗಳಾದ ಶ್ರೀ ಕೆ. ರಘುಪತಿ ಭಟ್, ಶ್ರೀ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ಶ್ರೀ ಪ್ರಮೋದ್ ಮಧ್ವರಾಜ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವರಿಷ್ಠ ಡಾ. ಎಂ. ಮೋಹನ ಆಳ್ವ, ಗೀತಾನಂದ ಫೌಂಡೇಶನ್‌ನ ಶ್ರೀ ಆನಂದ ಸಿ. ಕುಂದರ್ ಮತ್ತು ದ.ಕ ಮೊಗವೀರ ಸಂಘಟನೆಯ ಅಧ್ಯಕ್ಷ  ಶ್ರೀ ಜಯ ಸಿ. ಕೋಟ್ಯಾನ್ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.

ಉಡುಪಿ ಜಿಲ್ಲೆಯ ಕಡೆಕಾರ್ ಕಿದಿಯೂರು ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು, ಸ್ಥಳೀಯ ಶಾಲೆಗಳಲ್ಲಿ ಶಿಕ್ಷಣವನ್ನು ಪಡೆದರು. ಜೀವನೋಪಾಯಕ್ಕಾಗಿ  ಮುಂಬೈಗೆ ತೆರಳಿ ಕೆಲವು ವರ್ಷ ಉದ್ಯೋಗವನ್ನು ಮಾಡಿದರು. ನ೦ತರ ವಿದೇಶಕ್ಕೆ ತೆರಳಿದ ಇವರು ಸುಮಾರು ಹತ್ತು ವರ್ಷಗಳ ಕಾಲ ದುಡಿದು, ಊರಿನಲ್ಲಿ ತನ್ನದೇ ಉದ್ಯಮವನ್ನು ಸ್ಥಾಪಿಸಬೇಕೆಂಬ ಕನಸನ್ನು ಹೊತ್ತುಕೊಂಡರು.
ಹುಟ್ಟೂರಿನಲ್ಲಿ ಸ್ವಂತ ಉದ್ಯಮ ಸ್ಥಾಪಿಸಬೇಕೆಂಬ ಕನಸನ್ನು ಹೊತ್ತುಕೊಂಡು ಆಗಮಿಸಿದ್ದ ಭುವನೇಂದ್ರ ಕಿದಿಯೂರು  ಉಡುಪಿಯ ಹೃದಯ ಭಾಗದಲ್ಲಿ ಹೋಟೆಲೊಂದನ್ನು ಸ್ಥಾಪಿಸಿದರು. ಸ್ಥಾಪಿಸಿದ ಹೋಟೆಲಿಗೆ ತನ್ನದೇ ಊರಿನ ಹೆಸರನ್ನು ಇಡುವುದರ ಮೂಲಕ ಊರಿನ ಪ್ರೇಮವನ್ನು ಮೆರೆದರು. ಇದೀಗ ಹೋಟೆಲ್ ಕಿದಿಯೂರು ಎಲ್ಲರ ಮನೆ ಮಾತಾಗಿದೆ. ನೂರಾರು ಜನರಿಗೆ ಉದ್ಯೋಗ ನೀಡಿದ್ದ ಸಂತೃಪ್ತ ಭಾವನೆ ಭುವನೇಂದ್ರ ಕಿದಿಯೂರುರವರದು. ದೇಶ ವಿದೇಶಗಳಿಂದ ಹಲವಾರು  ಗಣ್ಯರು, ಪ್ರವಾಸಿಗರು, ವಿವಿಧ ಧರ್ಮದ ಮುಖಂಡರು, ಖ್ಯಾತ ರಾಜಕೀಯ ನೇತಾರರು, ಸಿನಿ ಲೋಕದ ದಿಗ್ಗಜರು ಉಡುಪಿ ಮತ್ತು ಆಸುಪಾಸಿಗೆ ಆಗಮಿಸಿದಾಗ ಹೊಟೇಲ್ ಕಿದಿಯೂರುನಲ್ಲಿ ವಾಸ್ತವ್ಯ ಹೂಡುತ್ತಾರೆ.
ಶ್ರೀಕೃಷ್ಣ ದೇವರ ಪರಮ ಭಕ್ತರಾಗಿರುವ ಭುವನೇಂದ್ರ ಕಿದಿಯೂರು ‘ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿ’ ರಚಿಸಿ, ಕಳೆದ ಹದಿನಾಲ್ಕು ವರ್ಷಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಹನುಮ ಜಯಂತಿ ಸಂದರ್ಭ ಶ್ರೀಕೃಷ್ಣಮಠದಲ್ಲಿ ಭಜನಾ ಕಾರ್ಯಕ್ರಮ, ಹೂ ಅಲಂಕಾರ, ಹಾಲು ಪಾಯಸ ಸೇವೆ ನೀಡುವುದರೊಂದಿಗೆ ಹಾಗೂ, ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣ ಸೇವೆಯನ್ನು ನೀಡುತ್ತ ಬಂದಿರುತ್ತಾರೆ.
ಜಿಲ್ಲೆಯ ಅಭಿವೃದ್ಧಿಯಲ್ಲಿ ತನ್ನದೆ ಕೊಡುಗೆಯನ್ನು ನೀಡುತ್ತಿರುವ ಹಿರಿಯ ಉದ್ಯಮಿ, ಸಾಮಾಜಿಕ ಕಾರ್ಯಕರ್ತ, ಕೊಡುಗೈ ದಾನಿ  ಭುವನೇಂದ್ರ ಕಿದಿಯೂರುರವರ  75 ಸಾರ್ಥಕ ಸಂವತ್ಸರದ ಶುಭಾವಸರದಲ್ಲಿ, “ರತ್ನೋತ್ಸವ ಅಭಿನಂದನಾ ಸಮಾರಂಭ” ದ ಮೂಲಕ ಗೌರವ ಸಲ್ಲಿಸಲು ನಾಡೋಜ ಡಾ. ಜಿ ಶಂಕರ್ ರವರ ನೇತೃತ್ವದಲ್ಲಿ ಅಭಿನಂದನಾ ಸಮಿತಿ ರಚಿಸಲಾಗಿದೆ.

ಕಾರ್ಯಕ್ರಮದ ಮೊದಲಿಗೆ ಚಂದ್ರಶೇಖರ್ ಮತ್ತು ಬಳಗ, ಶ್ರುತಿ ಮ್ಯೂಸಿಕ್, ಎರ್ಮಾಳ್ ಇವರಿಂದ ವಾದ್ಯ ಸಂಗೀತ ನಡೆಯಲಿದೆ. ವಿದ್ವಾನ್ ಸುಧೀರ್ ರಾವ್ ಅವರ ನಿರ್ದೇಶನದಲ್ಲಿ ನೃತ್ಯನಿಕೇತನ ಕೊಡವೂರು ಕಲಾವಿದರಿಂದ ಪ್ರಾರ್ಥನ ನೃತ್ಯ ನಡೆಯಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠೀಯಲ್ಲಿ  ಅಭಿನಂದನ  ಸಮಾರಂಭದ ಉಪಾಧ್ಯಕ್ಷ ರಮೇಶ್ ಕಿದಿಯೂರು , ಕೋಶಾಧಿಕಾರಿ ಯುವರಾಜ್ ಮಸ್ಕತ್ , ಮದುಸೂಧನ್ ಕೆಮ್ಮಣ್ಣುವಾಸುದೇವ್ ಭಟ್ಮುರಳಿ ಕಡೆಕಾರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!