ಚೀನಾ ಮಾದರಿಯಲ್ಲಿ ಕ್ರೀಡಾ ತರಬೇತಿ ನೀಡಿ:ಶೋಭಾ

ಉಡುಪಿ: ಮಕ್ಕಳಲ್ಲಿರುವ ಕ್ರೀಡಾ ಮನೋಭಾವನೆಯನ್ನು ಗುರುತಿಸಿ ಪ್ರೋತ್ಸಾಹಿಸುವುದರ ಜತೆಗೆ ಚೀನಾ ದೇಶದ ಮಾದರಿಯಲ್ಲಿ ಎಳವೆಯಲ್ಲಿಯೇ ಸಾಮರ್ಥ್ಯಕ್ಕಾನುಗುಣವಾಗಿ ಕ್ರೀಡಾ ತರಬೇತಿ ನೀಡಬೇಕು. ಇದರಿಂದ ಮಕ್ಕಳು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.


ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಬ್ರಹ್ಮಾವರ ವಲಯದ ಕ್ಷೇತ್ರ
ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಉಪ್ಪೂರು ಸರ್ಕಾರಿ ಪ್ರೌಢಶಾಲೆಯ ಸಂಯುಕ್ತ
ಆಶ್ರಯದಲ್ಲಿ ಬುಧವಾರ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ
ಬ್ರಹ್ಮಾವರ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.


ಚೀನಾ ದೇಶದಲ್ಲಿ ಮಕ್ಕಳಿಗೆ ಚಿಕ್ಕ ಪ್ರಾಯದಲ್ಲಿಯೇ ಕ್ರೀಡಾ ತರಬೇತಿಯನ್ನು
ನೀಡುತ್ತಾರೆ. ಉತ್ತಮ ಕ್ರೀಡಾಪಟುವನ್ನಾಗಿ ರೂಪುಗೊಳಿಸಲು ತರಬೇತುದಾರರನ್ನು ನೇಮಕ ಮಾಡಿ ವಿಶೇಷ ತರಬೇತಿ, ಕೌಶಲಗಳನ್ನು ಹೇಳಿಕೊಡುತ್ತಾರೆ. ಇದರಿಂದಲೇ ಚೀನಾ ದೇಶಕ್ಕೆ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಹೆಚ್ಚು ಪದಕಗಳನ್ನು ಗಳಿಸಲು ಸಾಧ್ಯವಾಗಿದೆ. ಆದ್ದರಿಂದ ಭಾರತದಲ್ಲಿಯೂ ಇಂತಹ ಮಾದರಿಯನ್ನು ಅನುಸರಿಸಿ, ಮಕ್ಕಳನ್ನು ಉತ್ತಮ ಕ್ರೀಡಾಪಟುಗಳನ್ನಾಗಿ ರೂಪುಗೊಳಿಸಬೇಕು ಎಂದರು.


ಶಾಸಕ ಕೆ. ರಘುಪತಿ ಭಟ್‌ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷ ದಿನಕರ ಬಾಬು,
ಸದಸ್ಯರಾದ ಗೀತಾಂಜಲಿ ಸುವರ್ಣ, ಜನಾರ್ದನ ತೋನ್ಸೆ, ತಾಪಂ ಸದಸ್ಯರಾದ ದಿನಕರ ಪೂಜಾರಿ ಹೇರೂರು, ನಳಿನಿ ಪ್ರದೀಪ್‌ರಾವ್‌, ಮಾಜಿ ಜಿಪಂ ಅಧ್ಯಕ್ಷ ಬಿ.ಎಲ್‌. ಶಂಕರ ಪೂಜಾರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಅಧೀಕ್ಷಕ ಎಸ್‌. ಮಧುಕರ್‌, ಬ್ರಹ್ಮಾವರ ವಲಯ ಕ್ಷೇತ್ರಶಿಕ್ಷಣಾಧಿಕಾರಿ ಓ.ಆರ್‌. ಪ್ರಕಾಶ್‌, ತಾಲ್ಲೂಕು ದೈಹಿಕ ಶಿಕ್ಷಣ
ಪರಿವೀಕ್ಷಕ ಭುಜಂಗ ಶೆಟ್ಟಿ ಉಪಸ್ಥಿತರಿದ್ದರು. ಉಪ್ಪೂರು ಫ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ನಾಗರತ್ನ ಸ್ವಾಗತಿಸಿದರು. ಸತೀಶ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!