ಕೋವಿಡ್-19 ವಿರುದ್ದದ ಹೋರಾಟದಲ್ಲಿ ಸ್ಕೌಟ್ಸ್&ಗೈಡ್ಸ್ ನ ನಿಷ್ಕಲ್ಮಷ ಸೇವೆ

ಉಡುಪಿ: ಕೋವಿಡ್-19 ವಿರುದ್ದದ ಹೋರಾಟದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ನಿಷ್ಕಲ್ಮಷ ಸೇವೆ ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ಶಿಸ್ತು, ಮೌಲ್ಯ ಮತ್ತು ದೇಶಪ್ರೇಮ ಬೆಳೆಸುವಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ಕಾರ್ಯ ಅತ್ಯಂತ ಪ್ರಮುಖವಾಗಿದ್ದು, ಪ್ರಸ್ತುತ ರಾಷ್ಟ್ರ ಎದುರಿಸುತ್ತಿರುವ ಆರೋಗ್ಯ ವಿಪತ್ತು ಕೋವಿಡ್-19 ವಿರುದ್ದದ ಹೋರಾಟದಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸಿದೆ.

ಕೇಂದ್ರ ಸರ್ಕಾರವು ಕೋವಿಡ್-19 ವಾರಿಯರ್ಸ್ ಗಳಿಗಾಗಿ IGOT ( Integrated government online Training ) ಎಂಬ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ರೋವರ್ಸ್, ರೇಂಜರ್ಸ್ ವಿದ್ಯಾರ್ಥಿಗಳು ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ನ ಶಿಕ್ಷಕರು ಭಾಗವಹಿಸಿ, ವಿಶೇಷ ತರಬೇತಿ ಪಡೆದಿದ್ದಾರೆ. ರೋವರ್ಸ್, ರೇಂಜರ್ಸ್ ವಿದ್ಯಾರ್ಥಿಗಳು , ರಾಜ್ಯದ ಅನೇಕ ಕಡೆಗಳಲ್ಲಿ ನಿರಾಶ್ರಿತರ ಕೇಂದ್ರ ಗಳಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಊಟ, ಉಪಹಾರ, ಕಿಟ್ ಗಳ ವಿತರಣೆ, ಮಾಸ್ಕ್ ವಿತರಣೆ ಹಾಗೂ ಜನಸಂದಣಿ ಇರುವಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ಮಾಸ್ಕ್ ಬ್ಯಾಂಕ್ ಎಂಬ ಕಾರ್ಯಕ್ರಮದ ಮೂಲಕ ಪ್ರತೀ ಜಿಲ್ಲೆಯಿಂದ 1 ಲಕ್ಷ ಮಾಸ್ಕ್ ತಯಾರಿಸಿ ಹಂಚುವ ಯೋಜನೆ ಆರಂಭಿಸಲಾಗಿದ್ದು, ಉಡುಪಿ ಜಿಲ್ಲೆಯಲ್ಲಿ 2 ದಿನದಲ್ಲಿ ಈಗಾಗಲೇ 6000 ತಯಾರಿಸಿದ್ದು, ಮೇ 15 ರೊಳಗೆ 1 ಲಕ್ಷ ಮಾಸ್ಕ್ ತಯಾರಿಕೆಯ ಗುರಿ ಸಾಧಿಸುವಲ್ಲಿ ನಿರತರಾಗಿದ್ದಾರೆ. ಲಾಕ್ ಡೌನ್ ಕಾರಣದಿಂದ, ಮನೆಯಲ್ಲಿಯೇ ಇರುವ ಮಕ್ಕಳು ಕ್ರೀಯಾಶೀಲರಾಗಲು ಮಾತ್ರವಲ್ಲದೇ ಸಾಮಾಜಿಕ ಅರಿವು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವ ಉದ್ದೇಶದಿಂದ ಮಕ್ಕಳಿಗೆ ವಿವಿಧ ಟಾಸ್ಕ್ ಗಳನ್ನು ನೀಡಿದ್ದು, ಸ್ವಚ್ಛತೆ ಮತ್ತು ಕೈ ತೊಳೆಯುವ ವಿಧಾನಗಳ ಬಗ್ಗೆ ತಮ್ಮ ನೆರೆಹೊರೆಯಲ್ಲಿ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸುವುದು, ಪರಿಚಿತರಿಗೆ ದೂರವಾಣಿ ಕರೆ ಮಾಡಿ ಕೋವಿಡ್-19 ಹರಡುವುದನ್ನು ತಡೆಯುವ ಬಗ್ಗೆ ತಿಳಿಸುವುದು, ಗಿಡ ನಡೆವುದು, ಮಾಸ್ಕ್ ತಯಾರಿ, ಬಟ್ಟೆ ಬ್ಯಾಗ್ ಗಳ ತಯಾರಿ, ಕೊರೋನಾ ಜಾಗೃತಿ ಕುರಿತು ಚಿತ್ರ ರಚನೆ, ರಂಗೋಲಿ ರಚನೆ ಮಾಡಲು ತಿಳಿಸಿದ್ದು, ಮಕ್ಕಳು ಅತ್ಯಂತ ಆಸಕ್ತಿಯಿಂದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿದ್ದಾರೆ.


ಮಕ್ಕಳು ತಾವು ಸಿದ್ದಪಡಿಸಿದ ಕೊರೋನಾ ಜಾಗೃತಿ ಕುರಿತ ಚಿತ್ರಗಳು ಮತ್ತು ರಂಗೋಲಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಉಡುಪಿಯಲ್ಲಿ ಕೋವಿಡ್-19 ವಿರುದ್ದದ ಜಿಲ್ಲಾಡಳಿತ ಕಾರ್ಯಗಳಲ್ಲಿ ಸ್ವಯಂ ಸೇವೆ ಸಲ್ಲಿಸಲು ಸಿದ್ದರಿರುವ 80 ರೋವರ್ಸ್ ರೇಂಜರ್ಸ್ ಪಟ್ಟಿಯನ್ನು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ನೀಡಿದ್ದು, ಜಿಲ್ಲೆಯಲ್ಲಿ ಅಗತ್ಯ ಬಿದ್ದಲ್ಲಿ ಸ್ವಯಂ ಸೇವಕರಾಗಿ ಕರೆ
ನೀಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದು, ಕರೆ ಬಂದಲ್ಲಿ ಯಾವುದೇ ಸಂದರ್ಭದಲ್ಲಿ ಸೇವೆಗೆ ಸಿದ್ದವಿರುವುದಾಗಿ ಹೇಳುತ್ತಾರೆ ಜಿಲ್ಲಾ ಸಂಘಟಕ ನಿತಿನ್ ಅಮಿನ್.

Leave a Reply

Your email address will not be published. Required fields are marked *

error: Content is protected !!