ಬಸ್, ಹೋಟೇಲ್, ಚಿನ್ನದ ಕೆಲಸದವರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ: ಕಾಪು ಯುವ ಕಾಂಗ್ರೆಸ್ ಆಗ್ರಹ
May 11, 2020
ಕಾಪು: ಸರಕಾರ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವವರ ನೆರವಿಗಾಗಿ ವಿಶೇಷ ಪ್ಯಾಕೇಜ್ ಪೋಷಣೆ ಮಾಡಿದ್ದು ಕೆಲವು ವರ್ಗದ ನೌಕರರನ್ನು ಪರಿಹಾರದಿಂದ ಹೊರಗೆ ಇಟ್ಟಿದೆ. ಅದರಲ್ಲಿ ಬಸ್ ನೌಕರರು, ಹೋಟೇಲ್ ಕೆಲಸದ ನೌಕರರು, ಚಿನ್ನದಂಗಡಿ ಕೆಲಸದವರಿಗೆ ಯಾವುದೇ ಪರಿಹಾರವನ್ನು ಘೋಷಿಸದೆ ಅವರನ್ನು ಸರಕಾರ ಮರೆತು ಬಿಟ್ಟಿದೆ. ಆದುದರಿಂದ ಕೂಡಲೇ ಸರಕಾರ ಹೋಟೇಲ್, ಬಸ್ ನೌಕರರು ಮತ್ತು ಚಿನ್ನದಂಗಡಿ ಕೆಲಸದವರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿಸೋಜ ಆಗ್ರಹಿಸಿದ್ದಾರೆ.
ಲಾಕ್‌ಡೌನ್‌ನಿಂದಾಗಿ ಹೋಟೇಲ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದು, ಕೆಲವು ನೌಕರರು ಒಂದು ತಿಂಗಳಿನಿಂದ ಮನೆಯಲ್ಲಿದ್ದು ಸಂಬಳ ಕೂಡಾ ಇಲ್ಲವಾಗಿದೆ. ಚಿನ್ನದ ಕೆಲಸ ಮಾಡುವ ಸಣ್ಣ ಅಂಗಡಿಗಳು ಮೊದಲೇ ಅರ್ಥಿಕ ನಷ್ಟದಲ್ಲಿದ್ದು ಈಗ ಕೊರೊನಾದಿಂದಾಗಿ ಒಂದು ತಿಂಗಳು ವ್ಯವಹಾರ ಬಂದ್ ಆಗಿದ್ದು ಕೆಲಸವಿಲ್ಲದೇ ಸಂಕಷ್ಟದಲ್ಲಿದ್ದಾರೆ. ಯಾವುದೇ ಆದಾಯವಿಲ್ಲದೇ ಸಾಲ ಕೂಡಾ ಕಟ್ಟದ ಪರಿಸ್ಥಿತಿ ಉಂಟಾಗಿದೆ. ಬಸ್‌ನಲ್ಲಿ ಕೆಲಸ ಮಾಡುವ ನೌಕರರಿಗೂ ಬಸ್ ಬಂದ್ ಆಗಿ ಕೆಲಸವಿಲ್ಲ. ಕೆಲವರಿಗೆ ಸಂಬಳ ಸಿಕ್ಕರೆ ಕೆಲವರಿಗೆ ಕೆಲಸವೂ ಇಲ್ಲ ಸಂಬಳವೂ ಇಲ್ಲ. ಸಾಲ ಪಡೆದು ಕುಟುಂಬ ನಿರ್ವಹಿಸುತ್ತಿದ್ದ ನೌಕರರು ದಿನದ ಆದಾಯದಲ್ಲಿ ಜೀವನ ನಡೆಸುತ್ತಿದ್ದರು. ಈಗ ಕೆಲಸವಿಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಆದುದರಿಂದ ಚಿನ್ನದ ಕೆಲಸದವರಿಗೆ, ಹೋಟೇಲ್ ಕಾರ್ಮಿಕರಿಗೆ, ಬಸ್ ನೌಕರರಿಗೆ ಆರ್ಥಿಕವಾಗಿ ಸಹಾಯವಾಗಲು ಸರಕಾರವು ವಿಶೇಷ ಪ್ಯಾಕೇಜ್‌ನ್ನು ಘೋಷಿಸುವಂತೆ ನ್ಯಾಯವಾದಿ ಮೆಲ್ವಿನ್ ಡಿಸೋಜ ಆಗ್ರಹಿಸಿದ್ದಾರೆ.