ಬಿಜೆಪಿಗೆ ಬಾಹ್ಯ ಬೆಂಬಲ ನೀಡಲು ಕುಮಾರಸ್ವಾಮಿಗೆ ಶಾಸಕರ ಸಲಹೆ

ಬೆಂಗಳೂರು: ಮೈತ್ರಿ ಸರ್ಕಾರ ಉರುಳಿದ ಬಳಿಕ ಜೆಡಿಎಸ್ ಕೆಲ ಶಾಸಕರಲ್ಲಿ ಹೊಸ ಆಲೋಚನೆ ಮೂಡಿದ್ದು, ಬಾಹ್ಯವಾಗಿ ಬಿಜೆಪಿಗೆ ಬೆಂಬಲ ನೀಡಲು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರ ಬಳಿ ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜ್ ವೆಸ್ಟ್ ಆಂಡ್ ಹೋಟೆಲಿನಲ್ಲಿ ಶುಕ್ರವಾರ ಸಂಜೆ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಶಾಸಕರ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿದ ಶಾಸಕ ಜಿಟಿ ದೇವೇಗೌಡ ಅವರು, ಪಕ್ಷದ ಎಲ್ಲ ಶಾಸಕರು ಕೂಡ ಒಗ್ಗಟ್ಟಿನಿಂದ ಇರಲು ಪಕ್ಷದ ಶಾಸಕರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಾಗಿತ್ತು. ಈ ವೇಳೆ ಕೆಲ ಶಾಸಕರು ವಿರೋಧಿ ಪಕ್ಷದಲ್ಲಿ ಕುಳಿತು ಕೆಲಸ ಮಾಡುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತಷ್ಟು ಶಾಸಕರು ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಬಗ್ಗೆ ಹೇಳಿದ್ದಾರೆ. ಎಲ್ಲ ಶಾಸಕರು ಅಂತಿಮ ತೀರ್ಮಾನ ತೆಗೆದುಕೊಳ್ಳುವ ನಿರ್ಧಾರವನ್ನು ಕುಮಾರಸ್ವಾಮಿ ಅವರಿಗೆ ನೀಡಿದ್ದಾರೆ ಎಂದರು.

ಜಿಟಿಡಿ ಅವರು ಕೂಡ ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ನಿನ್ನೆಯ ಸಭೆಯಲ್ಲಿ ಕುಮಾರಸ್ವಾಮಿ ಅವರು ಯಾವುದೇ ತೀರ್ಮಾನ ಪ್ರಕಟಿಸಿಲ್ಲ. ಎಚ್‍ಡಿ ದೇವೇಗೌಡ ಅವರ ಜೊತೆ ಚರ್ಚೆ ನಡೆಸಿ ಈ ಬಗ್ಗೆ ಹೇಳುವುದಾಗಿ ಅವರು ಹೇಳಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಬಿಜೆಪಿಗೆ ಜೆಡಿಎಸ್‍ನಿಂದ ಬಾಹ್ಯ ಬೆಂಬಲ ನೀಡುವುದರಿಂದ ಕ್ಷೇತ್ರಗಳ ಅಭಿವೃದ್ಧಿಗೆ ಸಹಕಾರ ಸಿಗುವುದು ಹಾಗೂ ಪಕ್ಷದ ಸಂಘಟನೆಗೆ ಸಹಕಾರಿ ಆಗಲಿದೆ ಎಂಬುವುದು ಕೆಲ ಶಾಸಕರ ಅಭಿಪ್ರಾಯವಾಗಿದೆ. ಆದರೆ ಸಭೆಯಲ್ಲೇ ಕೆಲ ಶಾಸಕರು ಬಾಹ್ಯ ಬೆಂಬಲಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ದೋಸ್ತಿ ಸರ್ಕಾರ ಉರುಳಲು ಬಿಜೆಪಿಯೇ ಕಾರಣ ಆಗಿರುವುದರಿಂದ ವಿರೋಧಿ ಪಕ್ಷದ ಸ್ಥಾನದಲ್ಲೇ ಇರೋಣ ಎಂದಿದ್ದಾರೆ ಎಂಬ ಮಾಹಿತಿದೆ.

ಪಕ್ಷದ ಶಾಸಕರ ಭಿನ್ನ ಅಭಿಪ್ರಾಯ ವ್ಯಕ್ತಪಡಿಸುವ ಹಿನ್ನೆಲೆಯಲ್ಲಿ ಸೋಮವಾರ ಬಿಎಸ್ ಯಡಿಯೂರಪ್ಪ ಅವರು ಬಹುಮತಯಾಚನೆ ವೇಳೆ ಗೈರಾಗಲು ಕೂಡ ಸಲಹೆ ಲಭಿಸಿದೆ ಎನ್ನಲಾಗಿದೆ. ಆದರೆ ಶಾಸಕರ ಈ ಅಭಿಪ್ರಾಯಕ್ಕೆ ಪಕ್ಷದ ವರಿಷ್ಠರಾದ ದೇವೇಗೌಡ ಅವರು ಒಪ್ಪಿಗೆ ಸೂಚಿಸುತ್ತಾರಾ ಎಂಬ ಕುತೂಹಲ ಮೂಡಿದೆ. ಇದರ ನಡುವೆಯೇ ಉಪಚುನಾವಣೆಗೆ ತಯಾರಿ ನಡೆಸಿರುವ ಎಚ್‍ಡಿಡಿ ಅವರು ಕ್ಷೇತ್ರಗಳಲ್ಲಿ ಪಕ್ಷದ ಪ್ರತಿನಿಧಿಗಳೊಂದಿಗೆ ಸರಣಿ ಸಭೆ ಕರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕರ ಅಭಿಪ್ರಾಯಕ್ಕೆ ಎಚ್‍ಡಿಡಿ ಒಪ್ಪಿಗೆ ನೀಡುತ್ತಾರಾ ಎಂಬ ಅನುಮಾನ ಮೂಡಿದೆ.

Leave a Reply

Your email address will not be published. Required fields are marked *

error: Content is protected !!