ಬಹುಕೋಟಿ ಹಗರಣ : ಮಾಜಿ ಸಚಿವ ಜಮೀರ್ ಅಹ್ಮದ್ ಹಾಗೂ ರೋಷನ್ ಬೇಗ್‍ಗೆ ಎಸ್‍ಐಟಿ ನೋಟಿಸ್
ಬೆಂಗಳೂರು: ಬಹುಕೋಟಿ ವಂಚಕ ಮನ್ಸೂರ್ ಖಾನ್ ವಿಚಾರಣೆ ಇಡಿ ತೀವ್ರಗೊಳಿಸಿದ್ದರೆ ಇತ್ತ ವಿಶೇಷ ತನಿಖಾ ತಂಡ(ಎಸ್‍ಐ) ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಮಾಜಿ ಸಚಿವ ಜಮೀರ್ ಅಹ್ಮದ್ ಹಾಗೂ ಶಾಸಕ ರೋಷನ್ ಬೇಗ್‍ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಈ ತಿಂಗಳ 29ರಂದು ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿಗಳು ಸೂಚಿಸಿದ್ದಾರೆ.
ದಿನೇ ದಿನೇ ಐಎಂಎ ಪ್ರಕರಣ ವಿಚಾರಣೆಯನ್ನು ಇಡಿ ಅಧಿಕಾರಿಗಳು ತೀವ್ರಗೊಳಿಸುತ್ತಿದ್ದು, ಇಡಿ ಅಧಿಕಾರಿಗಳು ಹಾಕುತ್ತಿರುವ ಪ್ರಶ್ನೆಗಳಿಗೆ ಆರೋಪಿ ಮನ್ಸೂರ್ ಖಾನ್ ತಬ್ಬಿಬ್ಬಾಗಿ ಪ್ರಕರಣದ ಹಿಂದೆ ಇರುವ ಕಾಣದ ಕೈಗಳ ಹೆಸರನ್ನು ಬಾಯಿಬಿಟ್ಟಿದ್ದಾನೆ.
ಮನ್ಸೂರ್ ಖಾನ್ ಜೊತೆ ಇಬ್ಬರೂ ವ್ಯವಹಾರ ನಡೆಸಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಮಧ್ಯೆ ಐಎಂಎ ಕಂಪನಿಯ ಲೆಕ್ಕ ಪರಿಶೋಧಕ ಇಕ್ಬಾಲ್ ಖಾನ್‍ರನ್ನು ಎಸ್‍ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಆದಾಯ ತೆರಿಗೆ ಇಲಾಖೆ ಮತ್ತು ಕಂಪನಿಗಳ ರಿಜಿಸ್ಟ್ರಾರ್ ಗೆ ತಪ್ಪು ಮಾಹಿತಿ ನೀಡಿದ ಆರೋಪ ಆಡಿಟರ್ ಮೇಲಿದೆ.
ಈ ಹಿಂದೆ ವಿಚಾರಣೆ ವೇಳೆ ಮನ್ಸೂರ್ 1000ಕ್ಕೂ ಹೆಚ್ಚು ಕೋಟಿ ಮೌಲ್ಯದ ವ್ಯವಹಾರದ ರಹಸ್ಯ ವಿವರವನ್ನು ಇಡಿ ಅಧಿಕಾರಿಗಳಿಗೆ ತಿಳಿಸಿದ್ದನು. ಅಲ್ಲದೆ ಕೆಲ ಪ್ರಭಾವಿಗಳ ಹೆಸರುಗಳನ್ನು ಕೂಡ ಮನ್ಸೂರ್ ಪ್ರಸ್ತಾಪಿಸಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿತ್ತು.
ಪ್ರಭಾವಿಗಳ ಜೊತೆಗಿನ ನಂಟು ಹಾಗೂ ಪ್ರಭಾವಿಗಳಿಗೆ ಹಂಚಿಕೆಯಾಗಿರುವ ಐಎಂಎನ ಲಾಭಾಂಶದ ಕುರಿತು ಮನ್ಸೂರ್ ಬಾಯ್ಬಿಟ್ಟಿದ್ದನು. ಮನ್ಸೂರ್ ಗೆ ಜೀವ ಬೆದರಿಕೆ ಇರುವ ಹಿನ್ನೆಲೆ ಆತನಿಗೆ ಹೈ ಸೆಕ್ಯುರಿಟಿ ನೀಡಲಾಗಿದ್ದು, ಖಾನ್ ಗೆ ರಾತ್ರಿಯಿಡಿ ಬಿಗಿ ಭದ್ರತೆ ಒದಗಿಸಲಾಗುತ್ತಿದೆ.