ಕಾವೇರಿ ಕೂಗಿಗೆ ಧ್ವನಿಗೂಡಿಸಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ
ಬೆಂಗಳೂರು: ಜೀವನದಿ ಕಾವೇರಿ ಉಳಿವಿಗಾಗಿ ಕಾವೇರಿ ಕಾಲಿಂಗ್(ಕಾವೇರಿ ಕೂಗು) ಎಂಬ ಅಭಿಯಾನವನ್ನು ಆರಂಭಿಸಲಾಗಿದೆ. ಈ ಅಭಿಯಾನಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಸಾಥ್ ನೀಡಿದ್ದಾರೆ.
ಕಾವೇರಿ ಕೋಟ್ಯಂತರ ಕನ್ನಡಿಗರನ್ನ ಹಾಗೂ ಭಾರತೀಯರನ್ನ ಸಾಕಿ ಸಲುಹಿದ್ದಾಳೆ. ಕಾಲ್ಪನಿಕ ಪಟ್ಟಣ ಮಾಲ್ಗುಡಿಯಿಂದ ಹಿಡಿದು ಇಂದಿನ ಸಾಫ್ಟ್ವೇರ್ವರೆಗೂ ಎಲ್ಲರಿಗೂ ಜೀವ ಕೊಟ್ಟಿದ್ದಾಳೆ. ಇಂದು ಬತ್ತಿಹೋಗುತ್ತಿರುವ ಕಾವೇರಿಯನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಗಿಡಗಳನ್ನು ನೆಟ್ಟು, ಮರಗಳಾಗಿ ಬೆಳೆಸುವ ಮೂಲಕ ಕಾವೇರಿಯನ್ನು ಉಳಿಸಬಹುದು. ಹೀಗಾಗಿ ಕಾವೇರಿ ಕಾಲಿಂಗ್ ಎಂಬ ಅಭಿಯಾನ ಆರಂಭಿಸಲಾಗಿದೆ. ನಾನೂ ಈ ಅಭಿಯಾನದ ಜೊತೆಗಿದ್ದೇನೆ. ನೀವು ನಮ್ಮೊಂದಿಗೆ ಕೈಜೋಡಿಸಿ ಎಂದು ರಕ್ಷಿತ್ ಪರಿಸರ ಪ್ರೇಮವನ್ನು ಮೆರೆದಿದ್ದಾರೆ.
#CauveryCalling ಅಭಿಯಾನದೊಂದಿಗೆ ಕೈಜೋಡಿಸಿರುವುದಕ್ಕೆ ಸಂತೋಷವಾಗಿದೆ. ಸಾವಿರಾರು ವರ್ಷಗಳಿಂದ ಹರಿಯುತ್ತಿರುವ ನದಿಯನ್ನು ಎರಡು ತಲೆಮಾರುಗಳ ಅವಧಿಯಲ್ಲಿ ನಾಶಪಡಿಸಲಾಗಿದೆ. ನಾವು ಈಗ ಕಾರ್ಯ ನಿರ್ವಹಿಸಬೇಕಾಗಿದೆ, ಕಾವೇರಿ ರಕ್ಷಣೆಗಾಗಿ ನಿಲ್ಲಬೇಕಿದೆ ಎಂದು ತಮ್ಮ ಫೇಸ್ಬುಕ್ ಹಾಗೂ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ವಿಡಿಯೋವೊಂದನ್ನು ಹಾಕಿ ಕಾವೇರಿ ಕಾಲಿಂಗ್ ಅಭಿಯಾನಕ್ಕೆ ಕೈಜೋಡಿಸಿ ಎಂದು ಕರೆಕೊಟ್ಟಿದ್ದಾರೆ.
ಈ ಹಿಂದೆ ಕೇರ್ ಎಂಬ ಎನ್ಜಿಓದ ಜೊತೆ ರಕ್ಷಿತ್ ಕೈಜೋಡಿಸಿ ಬೀದಿ ನಾಯಿಗಳಿಗೆ ಆಶ್ರಯ ನೀಡುವ ಕೆಲಸಕ್ಕೆ ಸಾಥ್ ನೀಡಿದ್ದರು. ಅಷ್ಟೇ ಅಲ್ಲದೆ ತಮ್ಮ ಫೇಸ್ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡು ಅಭಿಮಾನಿಗಳಿಗೆ ಹಾಗೂ ಎಲ್ಲರಿಗೂ ಅಭಿಯಾನಕ್ಕೆ ಕರೆ ನೀಡಿದ್ದರು.
ನಮ್ಮ ದೇಶದ ಪ್ರತಿಯೊಂದು ಬೀದಿಯಲ್ಲಿಯೂ ಹಲವಾರು ನಾಯಿಗಳನ್ನು ನೋಡುತ್ತೇವೆ. ಆದರೆ, ಮನೆಯಲ್ಲಿ ಸಾಕಲು ಮಾತ್ರ ಬ್ರೀಡ್ ನಾಯಿಗಳನ್ನು ಆಯ್ಕೆ ಮಾಡುತ್ತೇವೆ. ಬೀದಿ ನಾಯಿಗಳು ಕೂಡ ಬ್ರೀಡ್ ನಾಯಿಗಳಿಗಿಂತ ಏನು ಕಡಿಮೆ ಇಲ್ಲ. ನಮ್ಮ ವಾತಾವರಣಕ್ಕೆ ಅವುಗಳು ಚೆನ್ನಾಗಿ ಹೊಂದಿಕೊಳ್ಳುತ್ತದೆ. ಅಲ್ಲದೆ ಅವುಗಳ ಸಾಕಲು ಖರ್ಚು ಕೂಡ ಕಡಿಮೆ. ಈ ನಾಯಿಗಳನ್ನು ದತ್ತು ಪಡೆಯಿರಿ ಆಗ ಅವುಗಳಿಗೂ ಮನೆ, ಕುಟುಂಬ, ಪ್ರೀತಿ, ವಾತ್ಸಲ್ಯ ಸಿಗುತ್ತದೆ. ಇದೇ ಸ್ವಾತಂತ್ರ್ಯ ದಿನವನ್ನು ಎಲ್ಲರು ಬೀದಿ ನಾಯಿಗಳನ್ನು ದತ್ತು ಪಡೆಯೋಣ, ಆಶ್ರಯ ನೀಡೋಣ ಎಂದು ವಿಡಿಯೋ ಮೂಲಕ ರಕ್ಷಿತ್ ಮನವಿ ಮಾಡಿಕೊಂಡಿದ್ದರು.