ಬಂಟ್ವಾಳ ತಾಲೂಕಿನಲ್ಲಿ ಸರಳ ಈದ್ ಆಚರಣೆ ನೆರೆ ಸಂತ್ರಸ್ತರಿಗಾಗಿ ವಿಶೇಷ ಪ್ರಾರ್ಥನೆ-ದೇಣಿಗೆ ಸಂಗ್ರಹ
ಬಂಟ್ವಾಳ: ನೆರೆ ಸಂತ್ರಸ್ತರಿಗೆ ವಿಶೇಷ ಪ್ರಾರ್ಥನೆ, ಪರಿಹಾರ ನಿಧಿ ಸಂಗ್ರಹಿಸಿ ಸಂಭ್ರಮವಿಲ್ಲದೆ ಪರಸ್ಪರ ಶುಭಾಶಯ ವಿನಿಮಯ ಮಾಡುವ ಮೂಲಕ ಬಂಟ್ವಾಳ ತಾಲೂಕಿನಾದ್ಯಂತ ಸರಳವಾಗಿ ಈದುಲ್ ಅಝ್ಹಾ (ಬಕ್ರೀದ್) ಹಬ್ಬವನ್ನು ಆಚರಿಸಲಾಯಿತು.
ತಲಪಾಡಿ ಬದ್ರಿಯ ಜುಮಾ ಮಸೀದಿಯ ಖತೀಬ್ ಯಾಕೂಬ್ ಪೈಝಿ ಕುತುಬಾ ನಿರ್ವಹಿಸಿ, ಮನುಷ್ಯನ ಅತೀ ಆಸೆಗೆ ಪ್ರಕೃತಿ ಬಲಿಯಾಗುತ್ತಿದ್ದು, ಇದರ ಅಸಮತೋಲನದಿಂದಲೇ ಪ್ರಾಕೃತಿ ನೆರೆಯಂತಹ ಅತಿವೃಷ್ಠಿ, ಅನಾವೃಷ್ಠಿಗಳು ಸಂಭವಿಸುತ್ತವೆ. ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿಯೂ ಪ್ರಾಕೃತಿಕ ವಿಕೋಪಗಳಂತಹ ಅನಾಹುತಗಳಾಗಿವೆ. ಇನ್ನು ಮುಂದೆ ಯಾವುದೇ ಪ್ರಾಕೃತಿಕ ಅವಘಡಗಳು ಆಗದಂತೆ ದೇವ ಭಯದೊಂದಿಗೆ ಅಲ್ಲಾಹನಲ್ಲಿ ಪ್ರಾರ್ಥಿಸೋಣ ಎಂದರು. ಬಳಿಕ ಈದ್ ಸಂದೇಶ ನೀಡಿ, ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ಕೈಜೋಡಿಸುವಂತೆ ಹಾಗೂ ಪರಸ್ಪರ ಸಹಾಯ ಮಾಡುವಂತೆ ಮನವಿ ಮಾಡಿದರು. ಬಳಿಕ ಪಿಎಫ್ಐ ತಲಪಾಡಿ ಘಟಕದ ವತಿಯಿಂದ ಪರಿಹಾರ ನಿಧಿಯನ್ನು ಸಂಗ್ರಹಿಸಲಾಯಿತು.
ಬಂಟ್ವಾಳ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ನೆರೆ ಸಂತ್ರಸ್ತರಿಗಾಗಿ ಮತ್ತು ಶಾಂತಿ, ಏಕತೆಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಉಸ್ತಾದ್ ಉಸ್ಮಾನ್ ದಾರಿಮಿ ಕುತುಬಾ ನೆರವೇರಿಸಿದರು.
ಅದೇ ರೀತಿ ಬಿ.ಸಿ.ರೋಡ್ ಮಸ್ಜಿದುಲ್ ಇಸ್ಲಾಮ್, ಮಿತ್ತಬೈಲ್ ಮುಹಿಯುದ್ದೀನ್ ಜುಮಾ ಮಸೀದಿ, ಬಂಟ್ವಾಳ ಬದ್ರಿಯಾ ಜುಮಾ ಮಸೀದಿ, ಸಜಿಪಮೂಡ-ಕಾರಾಜೆ ನೂರುಲ್ ಹುದಾ ಜುಮಾ ಮಸೀದಿ, ಸಜಿಪನಡು ಕೇಂದ್ರ ಜುಮಾ ಮಸೀದಿ, ಸಜಿಪಮುನ್ನೂರು-ಮಲೈಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿ, ಕೊಳಕೆ ಮುಹಿಯುದ್ದೀನ್ ಜುಮಾ ಮಸೀದಿ, ಬೋಳಿಯಾರು ಮುಹಿಯುದ್ದೀನ್ ಜುಮಾ ಮಸೀದಿ, ಸಾಂಬಾರತೋಟ ನೂರಾನಿಯಾ ಜುಮಾ ಮಸೀದಿ, ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ, ಆಲಡ್ಕ ಬದ್ರಿಯಾ ಜುಮಾ ಮಸೀದಿ, ಗೂಡಿನಬಳಿ ಮಸ್ಜಿದ್-ಎ-ಮುತ್ತಲಿಬ್, ಗುಡ್ಡೆಯಂಗಡಿ ನೂರುದ್ದೀನ್ ಜುಮಾ ಮಸೀದಿ, ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿ,ನಂದಾವರ ಕೇಂದ್ರ ಜುಮಾ ಮಸೀದಿ, ಪಲ್ಲಮಜಲು ಬದ್ರಿಯಾ ಜುಮಾ ಮಸೀದಿ, ನೆಹರೂನಗರ ಬದ್ರಿಯಾ ಜುಮಾ ಮಸೀದಿ, ಬೋಳಂಗಡಿ ಹವ್ವಾ ಜುಮಾ ಮಸೀದಿ, ಬೋಳಂತೂರು ಹಿದಾಯತ್ ನಗರ ಬದ್ರಿಯಾ ಜುಮಾ ಮಸೀದಿ, ಮೆಲ್ಕಾರ್-ರೆಂಗೇಲು ಬದ್ರಿಯಾ ಜುಮಾ ಮಸೀದಿ, ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ, ಬಡಕಬೈಲ್ ಬದ್ರಿಯಾ ಜುಮಾ ಮಸೀದಿ, ಮುಲ್ಲರಪಟ್ನ ಮುಹಿಯುದ್ದೀನ್ ಜುಮಾ ಮಸೀದಿ, ಫರಂಗಿಪೇಟೆ ಮುಹಿಯುದ್ದೀನ್ ಜುಮಾ ಮಸೀದಿ, ಆರ್ಕುಳ ರಹ್ಮಾನೀಯ ಜುಮಾ ಮಸೀದಿಗಳಲ್ಲಿ ಈದ್ ಆಚರಿಸಲಾಯಿತು.
ಈದ್ ಪ್ರಾರ್ಥನೆಯ ಬಳಿಕ ಮುಸ್ಲಿಮರು ಪರಸ್ಪರ ಹಸ್ತಲಾಘವ, ಆಲಿಂಗನ ಮಾಡುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮುಂಜಾನೆಯೇ ಹೊಸ ವಸ್ತ್ರಗಳನ್ನು ಧರಿಸಿ ಪುರುಷರು ಹಾಗೂ ಮಕ್ಕಳು ಮಸೀದಿಗೆ ಬಂದು ದಿನದ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ದಾನ ಧರ್ಮಗಳನ್ನು ನಡೆಸುವ ಮೂಲಕ ಕೃತಾರ್ಥರಾದರು. ಬಳಿಕ ವಿವಿಧೆಡೆ ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ನೆರೆ ಸಂತ್ರಸ್ತರಿಗಾಗಿ ಕಿಟ್, ದೇಣಿಗೆಯನ್ನು ಸಂಗ್ರಹಿಸುವ ಮೂಲಕ ಹಬ್ಬವನ್ನು ಸರಳವಾಗಿ ಆಚರಿಸಿದರು.