ಅರೆಸ್ಟ್ ಮಾಡಿದ್ದು ಕಾನೂನು ಪ್ರಕಾರ ತಪ್ಪು: ಸಿದ್ದರಾಮಯ್ಯ
ಬೆಂಗಳೂರು : ಸಮನ್ಸ್ ಕೊಟ್ಟು, ವಿಚಾರಣೆಗೆ ಹಾಜರಾಗಲಿಲ್ಲ ಎಂದಾಗ ಬಂಧಿಸುವುದು ಸರಿ. ಆದರೆ ಡಿ.ಕೆ.ಶಿವಕುಮಾರ್ ಸಮನ್ಸ್ಗೆ ಗೌರವಕೊಟ್ಟು ವಿಚಾರಣೆಗೆ ಹಾಜರಾಗಿದ್ದಾರೆ. ಅವರನ್ನು ಹೇಗೆ ಬಂಧಿಸಿದಿರಿ? ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಸಾಕ್ಷಿ ನಾಶ ಮಾಡುವ, ತಲೆಮರೆಸಿಕೊಳ್ಳುವ ಅಪರಾಧಿಗಳನ್ನು ಬಂಧಿಸಲು ಅವಕಾಶವಿದೆ. ಆದರೆ ಶಿವಕುಮಾರ್ ಸಚಿವರಾಗಿದ್ದವರು. ಅವರನ್ನು ಉದ್ದೇಶಪೂರ್ವಕವಾಗಿ ದಸ್ತಗಿರಿ ಮಾಡಲಾಗಿದೆ. ಚಿದಂಬರಂ ಅವರಿಗೂ ಹೀಗೆಯೇ ಮಾಡಲಾಗಿತ್ತು. ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ತಕ್ಕ ಪಾಠ ಕಲಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಡಿಕೆಶಿ ವಿರುದ್ಧ ಬಿಜೆಪಿ ಸೇಡಿನ ರಾಜಕಾರಣ: ಸಿದ್ದರಾಮಯ್ಯ
‘ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ. ನ್ಯಾಯಾಲಯದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ನ್ಯಾಯ ಸಿಗಲಿದೆ. ಕಾಂಗ್ರೆಸ್ ಪಕ್ಷ ಮತ್ತು ಕಾರ್ಯಕರ್ತರ ಬೆಂಬಲ ಶಿವಕುಮಾರ್ ಅವರಿಗೆ ಇದೆ. ಕಾನೂನು ಹೋರಾಟ ಮುಂದುವರಿಸುತ್ತೇವೆ’ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದರು.
ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರ ಬಂಧನ ವಿರೋಧಿಸಿ ರಾಮನಗರ ಜಿಲ್ಲೆಯಲ್ಲಿ ಪ್ರತಿಭಟನೆ ಗರಿಗೆದರಿದೆ. ಅತ್ತ ದೆಹಲಿಯಲ್ಲಿ ಶಿವಕುಮಾರ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.