‘ಸಿದ್ದರಾಮಯ್ಯ ಹಗಲು ಕನಸು ಈಡೇರದು’: ಮಟ್ಟಾರ್

ಉಡುಪಿಯಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಮಹಾತ್ಮಾ ಗಾಂಧೀಜಿಯವರ ೧೫೦ನೇ ವರ್ಷಾಚರಣೆಯ ಸಮಾರೋಪದಲ್ಲಿ ಮಾಜಿ ಸಿ.ಎಂ. ಸಿದ್ದರಾಮಯ್ಯ ಬಿಜೆಪಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಿದ್ದಾರಾ ಎಂದು ಪ್ರಶ್ನಿಸಿರುವುದು ಅವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ.

ಸ್ವಾತಂತ್ರ್ಯಾ ನಂತರ ಅಂದಿನ ಕಾಂಗ್ರೆಸನ್ನು ವಿಸರ್ಜಿಸಬೇಕೆಂದಿರುವ ಮಹಾತ್ಮಾ ಗಾಂಧೀಜಿಯವರ ಮಾತನ್ನು ಅವರು ಮರೆತಂತಿದೆ. ರಾಷ್ಟ್ರಾಭಿಮಾನಿ ದೇಶಭಕ್ತರನ್ನು ಹೊಂದಿರುವ ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷ ಬಿಜೆಪಿಯ ಬಗ್ಗೆ ಅಲ್ಲಸಲ್ಲದ ಮಾತನ್ನಾಡುವುದು ಅವರ ಹಳೇ ಚಾಳಿ. ಸಿದ್ದರಾಮಯ್ಯ ಯಾರು ಎಂಬುದನ್ನು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿಯವರೇ ಚೆನ್ನಾಗಿ ವಿಶ್ಲೇಷಿಸಿದ್ದಾರೆ. ಸದಾ ತನ್ನ ಸ್ವಾರ್ಥದ ಬಗ್ಗೆಯೇ ಚಿಂತಿಸುತ್ತಾ ಕಾಂಗ್ರೆಸ್ ಪಕ್ಷವನ್ನು ಅಧ:ಪತನಕ್ಕೆ ತಳ್ಳಿರುವ ಅವರ ಅಧಿಕಾರಕ್ಕೇರುವ ಹಗಲು ಕನಸು ನನಸಾಗದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಹೇಳಿದ್ದಾರೆ.

ರಾಜಕೀಯ ಪಕ್ಷಗಳ ಇತಿಹಾಸವನ್ನು ತಿಳಿದುಕೊಳ್ಳಬೇಕೆಂದಿರುವ ಸಿದ್ಧರಾಮಯ್ಯ ಕಾಂಗ್ರೆಸ್ ಅಧಿನಾಯಕರಾದ ಗಾಂಧಿ ಕುಟುಂಬದ ಮೂಲದ ಸತ್ಯಾಸತ್ಯತೆಯ ವಾಸ್ತವ ಇತಿಹಾಸವನ್ನು ಮೊದಲು ಅರಿಯುವುದು ಉತ್ತಮ. ಅಂತೆಯೇ ಟಿಪ್ಪು ಸುಲ್ತಾನ್‌ನ ಕ್ರೌರ್ಯ, ಅತ್ಯಾಚಾರ-ಅನಾಚಾರದ ಬಗ್ಗೆಯೂ ಕೂಲಂಕುಷವಾಗಿ ತಿಳಿದುಕೊಂಡು ಮಾತನಾಡುವುದು ಸೂಕ್ತ. ಜನಾದೇಶದಂತೆ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್‌ನ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಸಿದ್ದರಾಮಯ್ಯ ಸ್ಥಿತಿ ಬಾಲಸುಟ್ಟ ಬೆಕ್ಕಿನಂತಾಗಿದೆ ಎಂದು ಮಟ್ಟಾರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!