ಪ್ರಧಾನಿ ಮೋದಿಗೆ ಟ್ವೀಟ್ ನ ಸುರಿಮಳೆಗೈದ ಸಿದ್ದರಾಮಯ್ಯ

ಬೆಂಗಳೂರು: ತುಮಕೂರಿನ‌‌ ಸಿದ್ದಗಂಗಾ ಮಠಕ್ಕೆ ಜಾತ್ಯತೀತ ಮತ್ತು ಪಕ್ಷಾತೀತವಾದ ಗೌರವದ ಸ್ಥಾನ ಇದೆ. ಈ ಕಾರಣಕ್ಕಾಗಿಯೇ ಅದು ಸರ್ವರೂ ಭಕ್ತಿಯಿಂದ ನಮಿಸುವ ಕ್ಷೇತ್ರ. ಇಂತಹ ಕ್ಷೇತ್ರದಲ್ಲಿ ಎಳೆಯ ಮಕ್ಕಳನ್ನು ಕೂರಿಸಿಕೊಂಡು ಕೊಳಕು ರಾಜಕೀಯದ ಭಾಷಣ ಮಾಡಿದ ಪ್ರಧಾನಮಂತ್ರಿ ಮೋದಿ ಅವರೇ, ನಿಮ್ಮನ್ನು ಆ ಪವಿತ್ರ ನೆಲ‌ ಕ್ಷಮಿಸದು ಎಂದು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರೇ, ನಿಮ್ಮದೇ ಪಕ್ಷದ ನಾಯಕರ ಸಾರಥ್ಯದ ಪತ್ರಿಕೆಯಲ್ಲಿ ಪ್ರಕಟವಾಗಿರುವ ಈ ವರದಿಗಳನ್ನು ನರೇಂದ್ರ ಮೋದಿ ಅವರ ಗಮನಕ್ಕೆ ತಂದು ಅವರನ್ನು ಭಾಷಣದಲ್ಲಿ ಉತ್ತರಿಸಲು ಹೇಳಿ ಎಂದು ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ‘ಕಗ್ಗತ್ತಲಿನಲ್ಲಿ ಭಾರತ” ಎಂಬ ಪತ್ರಿಕೆಯ ತುಣುಕನ್ನು ಅಪ್‌ಲೋಡ್ ಮಾಡಿದ್ದಾರೆ.
ಉತ್ತರ ಕೊಡಿ ಮೋದಿ ಎಂಬ ಹ್ಯಾಶ್ ಟ್ಯಾಗನ್ನೂ ಅದರೊಂದಿಗೆ ಸೇರಿಸಿದ್ದಾರೆ.

ಸ್ವಚ್ಚಭಾರತ್, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಮತ್ತು ನರೇಗಾ ಯೋಜನೆಗಳಿಗಾಗಿ ರಾಜ್ಯಕ್ಕೆ ನೀಡಬೇಕಾದ ಹಣದಲ್ಲಿ ಎಷ್ಟು‌‌ಸಾವಿರ ಕೋಟಿ ರೂಪಾಯಿ ಬಾಕಿ ಇದೆ ಗೊತ್ತಾ?
ನರೇಂದ್ರ ಮೋದಿ ಅವರೇ, ಈ ಮಾಹಿತಿಯನ್ನು ಬಿಎಸ್‌ವೈ ಬಿಜೆಪಿ ಅವರನ್ನೇ ಕೇಳಿ ತಿಳ್ಕೊಂಡು‌ ರಾಜ್ಯದ ಜನತೆಗೆ ಹೇಳಿ ಬಿಡಿ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೇ, ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂಬ ಘೋಷಣೆ ನೆನಪಿದದೆಯೇ? ಕಳೆದ ಆರು ವರ್ಷಗಳಲ್ಲಿ ರೈತರ ಆದಾಯ ಹೆಚ್ಚಾಗಿಲ್ಲ, ನಷ್ಟ ದ್ವಿಗುಣವಾಗಿದೆ. ಗ್ರಾಮೀಣ ಭಾಗದಲ್ಲಿ ಜನರ ಕೊಳ್ಳುವ ಸಾಮರ್ಥ್ಯ ಶೇಕಡಾ 8.8ರಷ್ಟು ಕಡಿಮೆಯಾಗಿದೆ ಎಂದರೆ ಏನರ್ಥ?.   ರಾಜ್ಯಕ್ಕೆ ಜಿಎಸ್‌ಟಿ ಪರಿಹಾರ ತಿಂಗಳಿಗೆ ರೂ.3600 ಕೋಟಿ ಬರಬೇಕು.  ಕಳೆದ ಸೆಪ್ಟೆಂಬರ್‌ನಿಂದ ಒಂದು ಪೈಸೆ ಹಣ ಬಂದಿಲ್ಲ. ಸುಮಾರು ರೂ.14-15 ಸಾವಿರ ಕೋಟಿ ಬಾಕಿ ಇದೆ. ನರೇಂದ್ರ ಮೋದಿ ಅವರೇ ಕೇಂದ್ರ ಸರ್ಕಾರವನ್ನು ದಿವಾಳಿ ಮಾಡುತ್ತಿದ್ದೀರಿ, ನಮ್ಮ ರಾಜ್ಯವನ್ನೂ ದಿವಾಳಿ ಮಾಡಲು ಹೊರಟಿದ್ದೀರಾ?, #ಉತ್ತರಕೊಡಿಮೋದಿ ಎಂದು ಸಿದ್ದರಾಮಯ್ಯ ಟ್ವಿಟ್‌ನಲ್ಲಿ ಪ್ರಶ್ನಿಸಿದ್ದಾರೆ.

ನೆರೆಹಾವಳಿಯಿಂದ ಆಗಿರುವ ನಷ್ಟ ಅಂದಾಜು ರೂ.50 ಸಾವಿರ ಕೋಟಿಗೂ ಅಧಿಕ. ರಾಜ್ಯ ಸರ್ಕಾರ ಕೇಳಿದ್ದು ರೂ.36 ಸಾವಿರ ಕೋಟಿ. ಕೇಂದ್ರ ಸರ್ಕಾರ ಕೊಟ್ಟಿದ್ದು ರೂ.1200 ಕೋಟಿ. ಕರ್ನಾಟಕದ ಬಗ್ಗೆ ಯಾಕೆ ತಾತ್ಸಾರ? ಎಂದು ಮತ್ತೊಂದು ಟ್ವೀಟ್‌ನಲ್ಲಿ ಟೀಕಾಪ್ರಹಾರ ನಡೆಸಿದ್ದಾರೆ.

ಕಾವೇರಿ ನೀರು ಹಂಚಿಕೆಯಲ್ಲಿ ಅನ್ಯಾಯ ಮಾಡಿದಿರಿ, ಈಗ ಮಹದಾಯಿ ಯೋಜನೆಯನ್ನು ತಡೆದು ದ್ರೊಹ ಮಾಡುತ್ತಿದ್ದೀರಿ, ಚುನಾವಣಾ ಕಾಲದಲ್ಲಿ ನಿಮ್ಮ ಜಲಸಂಪನ್ಮೂಲ ಸಚಿವ ಹೇಳಿದ್ದೇನು? ಈಗ ಮಾಡಿದ್ದೇನು?, ಕರ್ನಾಟಕದ ಜನರ ಬಗ್ಗೆ ನಿಮಗೆ ಯಾಕಿಷ್ಟು ದ್ವೇಷ, ಅಸೂಯೆ?  #ಉತ್ತರಕೊಡಿಮೋದಿ ಎಂದು ಟ್ವೀಟ್‌ ಮಾಡಿದ್ದಾರೆ.

ಕೇಂದ್ರ- ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ರಾಜ್ಯದ ಭಾಗ್ಯದ ಬಾಗಿಲು ತೆರೆಯುತ್ತದೆ ಎಂದು ಭಾಷಣ ಮಾಡಿದಿರಿ, ಅಮಾಯಕ ಜನ ನಿಮ್ಮ ಮಾತು ನಂಬಿ 25 ಸ್ಥಾನ ಗೆಲ್ಲಿಸಿಕೊಟ್ಟರು. ನಮ್ಮ ಭಾಗ್ಯದ ಬಾಗಿಲು ತೆಗೆಯಲಿಲ್ಲ, ಕರ್ನಾಟಕದ ಪಾಲಿಗೆ ನಿಮ್ಮ ಕಚೇರಿ ಬಾಗಿಲು ಮುಚ್ಚಿದ್ದೀರಿ, ಯಾಕೆ? ಉತ್ತರಕೊಡಿಮೋದಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಆಪರೇಷನ್ ಕಮಲ ಮಾಡಿ ಹಿಂದಿನ ಬಾಗಿಲಿನಿಂದ ಸರ್ಕಾರ ರಚಿಸುತ್ತೀರಿ, ನೈತಿಕ ರಾಜಕಾರಣದ ಬಗ್ಗೆ ಭಾಷಣ ಮಾಡುತ್ತೀರಿ, ರಾಜಕೀಯ ವಿರೋಧಿಗಳ ಮೇಲೆ ಐಟಿ, ಇಡಿ, ಸಿಬಿಐ ಛೂ ಬಿಡುತ್ತೀರಿ, ಗಣಿಕಳ್ಳರು, ಭೂಕಳ್ಳರನ್ನು ನಿಮ್ಮ ಪಕ್ಷಕ್ಕೆ ಕರೆದು ಮುದ್ದಾಡುತ್ತೀರಿ, ಇದೇನಾ ನಿಮ್ಮ ‘’ಸ್ವಚ್ಚ ಭಾರತ್’’? ಎಂದು ಸಿದ್ದರಾಮಯ್ಯ ಮತ್ತೊಂದು ಟ್ವೀಟ್‌ನಲ್ಲಿ ಕೇಳಿದ್ದಾರೆ.

ನೆರೆಗೆ ಪರಿಹಾರ ಕೊಡಲಿಲ್ಲ,  ಜಿಎಸ್ ಟಿ ನಷ್ಟಕ್ಕೆ ಪರಿಹಾರ ತುಂಬಿಕೊಡಲಿಲ್ಲ, ಕೇಂದ್ರ ಅನುದಾನದಲ್ಲಿ ನೀಡಬೇಕಾದ ನ್ಯಾಯಬದ್ಧ ಪಾಲೂ ಕೊಡಲಿಲ್ಲ, ಈಗ ಯಾವ ಮುಖಹೊತ್ತು ರಾಜ್ಯಕ್ಕೆ ಬರ್ತಿದ್ದೀರಿ ನರೇಂದ್ರ ಮೋದಿ ಅವರೇ? ರಾಜ್ಯದ ಜನ ನೆರೆ ನೀರಲ್ಲಿ ಮುಳುಗಿದ್ದಾಗ ಕನಿಷ್ಠ ಸಾಂತ್ವನ ನೀಡಲು ನೀವು ಬರಲಿಲ್ಲ, ಅನುಕಂಪಕ್ಕಾದರೂ ನಿಮ್ಮಿಂದ ನಾಲ್ಕಕ್ಷರ ಸಮಾಧಾನದ ಮಾತು ಹೊರಡಲಿಲ್ಲ.  ಈಗ ರೈತರ ಕಲ್ಯಾಣದ ಡೋಂಗಿ ಕಾರ್ಯಕ್ರಮಗಳ ಪ್ರಚಾರಕ್ಕೆ ನಮ್ಮ ಅಮಾಯಕ ಜನ ನೆನಪಾಗುತ್ತಿದ್ದಾರಾ? ಎಂದು ಮಾಜಿ ಸಿಎಂ ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!