ಗಾಂಧಿ ಕುಟೀರ ಹಸ್ತಾಂತರಿಸಿದ ಸಿದ್ದರಾಮಯ್ಯ

ಉಡುಪಿ: ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆ ವತಿಯಿಂದ ರಾಪ್ಟ್ರಪಿತ ಮಹಾತ್ಮ ಗಾಂಧೀಜಿ ಜನ್ಮ ಶತಾಬ್ದಿ ಅಂಗವಾಗಿ “ಗಾಂಧಿ-150 ” ಕಾರ್ಯಕ್ರಮದಡಿ ಅಲೆವೂರು ಗ್ರಾಪಂ ವ್ಯಾಪ್ತಿಯ ಕೊರಂಗ್ರಪಾಡಿ ವಾರ್ಡ್‌ನ ಜನತಾ ಕಾಲನಿಯ ಬಡ ಪರಿಶಿಷ್ಟ ಜಾತಿಯ ನಳಿನಿ ಕುಟುಂಬಕ್ಕೆ ನೂತನವಾಗಿ ನಿರ್ಮಿಸಿದ ಮನೆ ಗಾಂಧಿ ಕುಟೀರ ಇದರ ಹಸ್ತಾಂತರ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬುಧವಾರ ನೆರವೇರಿಸಿದರು.

ಫೆಬ್ರುವರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರಖಂಡ್ರೆ ಉದ್ಯಾವರದಲ್ಲಿ ಗಾಂಧೀಜಿ 150 ನೇ ವರ್ಷಾಚರಣೆಗೆ ಚಾಲನೆ ನೀಡಿದ್ದರು. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ,ದಾನಿಗಳ ಸಹಕಾರದಿಂದ ಬಡ ಮಹಿಳೆಗೆ ಮನೆ ನಿರ್ಮಿಸಲಾಗಿತ್ತು. ದಾನಿಗಳ ನೆರವಿನಿಂದ 4.80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ 550 ಚದರ ಅಡಿ ವಿಸ್ತ್ರೀರ್ಣದ ನೂತನ ಮನೆಯ ಗಾಂಧಿ ಕುಟೀರ ಮನೆಯ ಫಲಕವನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅನಾವರಣಗೊಳಿಸಿದರು. ನೂತನ ಮನೆಯನ್ನು ಉದ್ಘಾಟಿಸಿದ ಸಿದ್ದರಾಮಯ್ಯ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಮಾಜಮುಖಿ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಅವರು ಮನೆಯ ಮಾಲಕಿ ನಳಿನಿ ಅವರಿಗೆ ಗಾಂಧೀಜಿಯ ಭಾವಚಿತ್ರವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವಿಷ್ಣುನಾಥನ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಯು.ಆರ್.ಸಭಾಪತಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ಜಿ.ಎ.ಬಾವಾ, ಎಂ.ಎ.ಗಫೂರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಉಡುಪಿ ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್,ಪ್ರವೀಣ್ ಶೆಟ್ಟಿ, ಸುಧಾಕರ್ ಪೂಜಾರಿ, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಗಂಧಿ ಶೇಖರ್, ರಿಯಾಝ್ ಪಳ್ಳಿ, ಕಿರಣ್ ಕುಮಾರ್, ಉದ್ಯಾವರ ನಾಗೇಶ್, ಅಲೆವೂರು ಹರೀಶ್ ಕಿಣಿ, ಕಿಶನ್ ಹೆಗ್ಡೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!