ಉಡುಪಿ ಜಿಲ್ಲಾ ಆಸ್ಪತ್ರೆಯ ಗೆಳತಿ ವಿಶೇಷ ಚಿಕಿತ್ಸಾ ಘಟಕಕ್ಕೆ ಶ್ಯಾಮಲಾ ಕುಂದರ್ ದಿಢೀರ್ ಭೇಟಿ

ಕೇಂದ್ರ ಸರಕಾರದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದ ಶ್ರೀಮತಿ ಶ್ಯಾಮಲಾ ಎಸ್ ಕುಂದರ್ ರವರು ಇಂದು ಉಡುಪಿ ನಗರದ ನಿಟ್ಟೂರಿನಲ್ಲಿರುವ “ಸಖಿ ಒನ್ ಸ್ಟೊಪ್ ಸೆಂಟರ್” ಮತ್ತು “ಸ್ಟೇಟ್ ಹೋಮ್”ಗೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಕರ್ಯ ಮತ್ತು ಸವಲತ್ತುಗಳನ್ನು ಪರಿಶೀಲಿಸಿದರು ಹಾಗೂ ಅಲ್ಲಿನ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ನಂತರ, ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿರುವ “ಗೆಳತಿ” ಸಹಾಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು.

ಆಸ್ಪತ್ರೆಯ ಇನ್ನೊಂದು ಪಾರ್ಶ್ವದಲ್ಲಿ ಎರಡನೆಯ ಮಹಡಿಯ ಕೊನೆಯಲ್ಲಿರುವ “ಗೆಳತಿ” ಕೇಂದ್ರವು ಆಸ್ಪತ್ರೆಯ ಪ್ರವೇಶ ದ್ವಾರದಿಂದ ಬಹಳ ದೂರದಲ್ಲಿದ್ದು, ಸರಿಯಾದ ಸೂಚನಾ ಫಲಕಗಳನ್ನು ಅಳವಡಿಸದೇ ಇರುವುದನ್ನು ಗಮನಿಸಿದರು. ಇಂತಹ ಅವ್ಯವಸ್ಥೆಯು ಅಗತ್ಯವಿರುವ ನಾಗರಿಕರಿಗೆ ಯಾವುದೇ ರೀತಿಯ ಪ್ರಯೋಜನವನ್ನು ನೀಡುವುದಿಲ್ಲ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿರುವ “ಗೆಳತಿ” ಕೇಂದ್ರದ ಮಾಹಿತಿಯು ಬಹುತೇಕ ಜನರಿಗೆ ತಿಳಿದಿಲ್ಲ ಎಂದು ಖೇದ ವ್ಯಕ್ತ ಪಡಿಸಿದರು.

ನಂತರ, ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಕೆ. ವಿದ್ಯಾ ಕುಮಾರಿ ಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಸೇವಾ ಇಲಾಖೆ ಹಾಗೂ ಇನ್ನಿತರ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ರಾಷ್ಟ್ರೀಯ ಮಹಿಳಾ ಆಯೋಗವು ನೂತನವಾಗಿ ದೇಶದಾದ್ಯಂತ ಪ್ರತೀ ಗ್ರಾಮದಲ್ಲಿ ಆಯೋಜಿಸಿಲಿರುವ ನಾರೀ ಅದಾಲತ್ ಕುರಿತು ಮಾಹಿತಿಯನ್ನು ನೀಡಿದರು.

ಸಾಂತ್ವನ ಕೇಂದ್ರದ ಮೂಲಕ ನೀಡಲಾಗುತ್ತಿರುವ ಸೇವೆಗಳು, ಬಗೆಹರಿಸಲ್ಪಟ್ಟ ದೂರುಗಳು, ಕೆಡಿಪಿ ಸಭೆಗಳು, ಮಾತೃ ಪೂರ್ಣ, ಗೊಂಚಲು ಸಭೆ, ಪೋಕ್ಸೋ ಕಾಯ್ದೆ ಮತ್ತು ಬೇಟೀ ಬಚಾವೋ ಬೇಟೀ ಪಡಾವೋ ಅಭಿಯಾನ, ಮೊದಲಾದವುಗಳ ಕುರಿತು ಚರ್ಚೆ ನಡೆಸಿದರು. ಜಿಲ್ಲಾ ಆಸ್ಪತ್ರೆಯಲ್ಲಿರುವ “ಗೆಳತಿ” ಕೇಂದ್ರದ ಅವ್ಯವಸ್ಥೆಯ ಕುರಿತು ಸಭೆಯಲ್ಲಿ ಮಾತನಾಡಿದ ಶ್ಯಾಮಲಾ ಕುಂದರ್, ಸೂಕ್ತವಾದ ಸ್ಥಳಾವಕಾಶವನ್ನು ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಉಡುಪಿ ಜಿಲ್ಲೆಯಲ್ಲಿ ಕಟ್ಟಡ ಕಾಮಗಾರಿ ನಿರ್ವಹಿಸುವ ಮಹಿಳಾ ಕಾರ್ಮಿಕರ ಮತ್ತು ಅವರ ಮಕ್ಕಳ ಯೋಗಕ್ಷೇಮದ ಕುರಿತು ಮಾಹಿತಿಯನ್ನು ಕೇಳಿ ಪಡೆದರು. ಕೇಂದ್ರ ಸರಕಾರದ ವತಿಯಿಂದ ನೀಡಲಾಗುತ್ತಿರುವ ಮಹಿಳಾ ಅಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತು ಮಹಿಳಾ ಸಶಕ್ತೀಕರಣ ಯೋಜನೆಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡುವ ಉದ್ದೇಶದಿಂದ ಒಂದು ದಿನದ ಮಾಹಿತಿ ಮತ್ತು ತರಬೇತಿ ಕಾರ್ಯಾಗಾರವನ್ನು ರಾಷ್ಟ್ರೀಯ ಮಹಿಳಾ ಆಯೋಗ, ದಕ್ಷಿಣ ಕನ್ನಡ-ಉಡುಪಿ ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಭಾಗಿತ್ವದಲ್ಲಿ ಉಭಯ ಜಿಲ್ಲೆಗಳ ಗ್ರಾಮ-ತಾಲೂಕು-ಜಿಲ್ಲಾ ಪಂಚಾಯತ್ ಗಳ ಮಹಿಳಾ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸಮಾಜ ಸೇವಾ ಕಾರ್ಯಕರ್ತರು, ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರು, ಎನ್ ಜಿ ಓ ಗಳ ಸದಸ್ಯರು, ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಮಹಿಳಾ ಸದಸ್ಯರುಗಳಿಗೆ ಶೀಘ್ರದಲ್ಲಿ ಆಯೋಜಿಸಬೇಕು ಎಂದು ಸೂಚಿಸಿದರು.

“ಬೇಟೀ ಬಚಾವೋ ಬೇಟೀ ಪಡಾವೋ” ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ಪ್ರೊ. ಶ್ರೀನಾಥ್ ರಾವ್, ವಿವಿಧ ಇಲಾಖೆಗಳ ನಿರ್ದೇಶಕರು, ಉಪನಿರ್ದೇಶಕರು, ಹಿರಿಯ ಅಧಿಕಾರಿಗಳು, ಸಮನ್ವಯಕಾರರು ಮತ್ತು ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿ ವಿಚಾರ ವಿನಿಮಯ ಮಾಡಿದರು.

Leave a Reply

Your email address will not be published. Required fields are marked *

error: Content is protected !!