ತೈಲ ಕಲಬೆರಕೆ ದಂಧೆಗೆ ಕಡಿವಾಣ ಹಾಕಿ: ಶೋಭಾ ಕರಂದ್ಲಾಜೆ
ಉಡುಪಿ: ಹಾಸನ ಸೇರಿದಂತೆ ರಾಜ್ಯದ ಹಲವು ಪಾಯಿಂಟ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ಟ್ಯಾಂಕರ್‌ಗಳಿಗೆ ಕನ್ನ ಹಾಕಿ, ತೈಲ ಕಲಬೆರಕೆ ಮಾಡಲಾಗುತ್ತಿದೆ. ಈ ದಂಧೆಗೆ ಸಚಿವರು ಕಡಿವಾಣ ಹಾಕಿ ಪೆಟ್ರೋಲಿಯಂ ಡೀಲರ್ಸ್‌ಗಳ ರಕ್ಷಣೆಗೆ ನಿಲ್ಲಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಮನವಿ ಮಾಡಿದರು.ಕರ್ನಾಟಕ ರಾಜ್ಯ ಪೆಟ್ರೋಲಿಯಂ ವರ್ತಕರ ಮಹಾಮಂಡಳ ಶನಿವಾರ ನಗರದ ಲಿಗಾಡೊ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತೈಲ ಸಮಾಗಮ–2020 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದಲ್ಲಿ ತೈಲ ಕಳವು ಹಾಗೂ ಕಲಬೆರಕೆ ಜಾಗಗಳನ್ನು ಗುರುತಿಸಿ, ದಂಧೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ತೈಲ ವರ್ತಕರ ಮೇಲೆ ಅಧಿಕಾರಿಗಳಿಂದ ನಡೆಯುತ್ತಿರುವ ಕಿರುಕುಳ ತಪ್ಪಿಸಬೇಕು ಎಂದು ಒತ್ತಾಯಿಸಿದರು. ಲಂಚ ಕೊಡದಿದ್ದರೆ ಪೆಟ್ರೋಲ್ ಬಂಕ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ದಾಖಲೆಗಳು ಸರಿಯಿದ್ದರೂ ಹಣ ಕೊಡಬೇಕಾದ ಪರಿಸ್ಥಿತಿ ಇದೆ. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಿ, ಅಧಿಕಾರಿಗಳ ಕಿರುಕುಳ ತಪ್ಪಿಸಬೇಕು ಎಂದು ಶೋಭಾ ಕರಂದ್ಲಾಜೆ ಸಲಹೆ ನೀಡಿದರು.
ನಿಗದಿತ ಪರಿಧಿಯೊಳಗೆ ಇಂತಿಷ್ಟೆ ಪೆಟ್ರೋಲ್ ಬಂಕ್‌ಗಳನ್ನು ತೆರೆಯಬೇಕು ಎಂಬ ನಿಯಮ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ. ಒಂದೇ ಜಾಗದಲ್ಲಿ ಹಲವು ಬಂಕ್‌ಗಳು ನಿರ್ಮಾಣವಾಗುತ್ತಿದ್ದು, ಡೀಲರ್ಸ್‌ಗಳು ನಷ್ಟದ ಸುಳಿಗೆ ಸಿಲುಕುತ್ತಿದ್ದಾರೆ. ಸಾಲ ತೀರಿಸಲಾಗಿದೆ ಹಲವರು ಉದ್ಯಮದಿಂದ ವಿಮುಖರಾಗಿದ್ದಾರೆ. ಪರವಾನಗಿ ನೀಡುವ ವಿಚಾರದಲ್ಲಿ ಡೀಲರ್ಸ್‌ಗಳ ಪರವಾದ ನಿಲುವು ತೆಗೆದುಕೊಳ್ಳಬೇಕಿದೆ ಎಂದರು.ಡೀಲರ್ಸ್‌ಗಳ ಬೇಡಿಕೆಗಳು ಹಾಗೂ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಬಳಿ ಮಾತುಕತೆ ನಡೆಸುತ್ತೇನೆ ಎಂದು ಸಂಸದೆ ಭರವಸೆ ನೀಡಿದರು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ಮಾತನಾಡಿ, ‘ಪೆಟ್ರೋಲ್ ಬಂಕ್ ಮಾಲೀಕರ ವಿರುದ್ಧ ಸುಖಾಸುಮ್ಮನೆ ಪ್ರಕರಣ ದಾಖಲಿಸಬಾರದು, ಮನಸ್ಸಿಗೆ ನೋವಾ ಗುವಂತೆ ನಡೆದುಕೊಳ್ಳ ಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸಚಿವರು ತಿಳಿಸಿದರು.
ಡೀಲರ್ಸ್‌ಗಳು ಮುಷ್ಕರ ನಡೆಸಿದರೆ ದೇಶ ಸ್ಥಬ್ಧವಾಗುತ್ತದೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತವೆ. ನಿಮ್ಮ ಬೇಡಿಕೆಗಳು ಹಾಗೂ ಸಮಸ್ಯೆಗಳ ಈಡೇರಿಕೆಗೆ ಪ್ರಾಮಾಣಿಕವಾಗಿ ಪ್ರಯತ್ನಿ ಸುವುದಾಗಿ ಭರವಸೆ ನೀಡಿದರು.ರಾಜ್ಯ ಪೆಟ್ರೋಲಿಯಂ ವರ್ತಕರ ಮಹಾಮಂಡಳದ ಅಧ್ಯಕ್ಷ ಎಚ್.ಎಸ್.ಮಂಜಪ್ಪ ಮಾತನಾಡಿ, ‘ಪೆಟ್ರೋಲಿಯಂ ಮಾರಾಟ ಉದ್ಯಮ ಮೇಲ್ನೋಟಕ್ಕೆ ಆಕರ್ಷಣೀಯವಾಗಿ ಕಂಡರೂ ಉದ್ಯಮದೊಳಗೆ ಸಾಕಷ್ಟು ಸಮಸ್ಯೆಗಳಿವೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು’ ಎಂದು ಒತ್ತಾಯಿಸಿದರು.
ಡೀಲರ್ಸ್‌ಗಳಿಗೆ ಪಿಂಚಣಿ ಸೌಲಭ್ಯವಿಲ್ಲ, 24 ಗಂಟೆ ಕಾರ್ಯ ನಿರ್ವಹಿಸಬೇಕು, ‘ಆರೋಗ್ಯ ಸುರಕ್ಷತೆ ಇಲ್ಲ. ಗಾಣಕ್ಕೆ ಕೈಕೊಟ್ಟ ಸ್ಥಿತಿಯಲ್ಲಿ ಉದ್ಯಮ ನಡೆಸುತ್ತಿದ್ದೇವೆ. ಸರ್ಕಾರದ ಕಾಯ್ದೆ ಕಾನೂನುಗಳ ಮಧ್ಯೆ ಸಿಲುಕಿ ನಾಜೂಕಿನಿಂದ ವ್ಯವಹಾರ ಮಾಡುತ್ತಿದ್ದೇವೆ’ ಎಂದರು.ಡೀಲರ್ಸ್‌ಗಳ ಕೆಲವು ಸಮಸ್ಯೆಗಳಿಗೆ ಪರಿಹಾರಗಳೇ ಇಲ್ಲ. ಪರಿಹಾರ ಸಾಧ್ಯವಿರುವ ಸಮಸ್ಯೆಗಳಿಗೆ ಸ್ಪಂದನ ಸಿಗುತ್ತಿಲ್ಲ. ಈಗಲಾದರೂ ಡೀಲರ್ಸ್‌ಗಳ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಮಂಜಪ್ಪ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪೆಟ್ರೋಲಿಯಂ ವರ್ತಕರ ಮಹಾಮಂಡಳದ ತಿವಾರಿ, ಆನಂದ್ ಕಾರ್ನಾಡ್, ಕೆ.ವಿ.ಶೆಣೈ, ಅನೀಸ್ ಸನಾವುಲ್ಲ, ಸತೀಶ್ ಕಾಮತ್, ವಾಮನ್ ಪೈ, ವಿಶ್ವನಾಥ್ ಪಾಟೀಲ್, ರಾಜೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು