ವಿಕ್ಟರಿ ಸಿಂಬಲ್ ತೋರಿಸಿ ಪರಪ್ಪನ ಅಗ್ರಹಾರ ಸೇರಿದ ಅಮೂಲ್ಯ
ಬೆಂಗಳೂರು: ಪಾಕಿಸ್ತಾನ ಜಿಂದಾಬಾದ್ ಅಂತ ಘೋಷಣೆ ಕೂಗಿ ಏಕಾಏಕಿ ಕುಖ್ಯಾತಿ ಗಳಿಸಿದ ಆರೋಪಿ ಅಮೂಲ್ಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ. ಅಮೂಲ್ಯ ಹೇಳಿಕೆ ವಿಡಿಯೋ ಆಧಾರದ ಮೇಲೆ ಅವಳನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸ್ವಯಂ ಪ್ರೇರಿತ ಕೇಸ್ ದಾಖಲಿಸಿ ಎಫ್‍ಐಆರ್ ದಾಖಲಿಸಿಕೊಂಡು, ಅಮೂಲ್ಯ ವಿರುದ್ಧ ಐಪಿಸಿ ಸೆಕ್ಷನ್ 124ಎ(ದೇಶದ್ರೋಹ ಆರೋಪ), 153ಎ(ಶತೃತ್ವ ಬಿತ್ತುವುದು), 153ಬಿ(ಭಾವೈಕ್ಯತೆ ಹಾಗೂ ರಾಷ್ಟೀಯ ಏಕೀಕರಣಕ್ಕೆ ಧಕ್ಕೆ ತರುವುದು) ಸೆಕ್ಷನ್ ಅಡಿ ಕೇಸ್ ದಾಖಲಿಸಿದ್ದಾರೆ.ತಡ ರಾತ್ರಿ ನ್ಯಾಯಾಲಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.
ಪರಪ್ಪನ ಅಗ್ರಹಾರದ ಜೈಲುಪಾಲಾದರೂ ಕೂಡ ಅಮೂಲ್ಯಳಿಗೆ ಭಯವಾಗಲಿ, ಪಶ್ಚಾತಾಪವಾಗಿ ಆಗಿಲ್ಲ. ಬದಲಿಗೆ ವಿಕ್ಟರಿ ಸಿಂಬಲ್ ತೋರಿಸಿ ಖುಷಿಯಲ್ಲಿ ಬಂಧಿಖಾನೆಗೆ ಹೋದಳು.
ಸಿಎಎ ಹಾಗೂ ಎನ್‍ಸಿಆರ್ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ಎಂಐಎಂ ಮುಖ್ಯಸ್ಥ ಆಸಾದುದ್ದೀನ್ ಓವೈಸಿ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ, ಎನ್ ಆರ್ ಸಿ ವಿರೋಧಿಸಿ ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್, ಹಿಂದೂ-ಮುಸ್ಲಿಂ-ಸಿಖ್- ಈಸಾಯಿ ಫೆಡರೇಷನ್ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಯುವತಿಯೊಬ್ಬಳು ಪಾಕಿಸ್ತಾನ ಜಿಂದಾಬಾದ್ ಎಂದು ಪಾಕ್ ಪರ ಜೈಕಾರ ಕೂಗಿದ್ದಳು.
ಯುವತಿ ಅಮೂಲ್ಯ ಮಾತು ಆರಂಭಿಸುವ ಮುನ್ನವೇ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದರು. ವೇದಿಕೆ ಮೇಲೆ ಬಂದ ಚಿಕ್ಕಮಗಳೂರಿನ ಕೊಪ್ಪ ಮೂಲದ ಯುವತಿ ಅಮೂಲ್ಯ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಕೂಗಿದ್ದು, ಅಮೂಲ್ಯ ಈ ರೀತಿ ಘೋಷಣೆ ಕೂಗುತ್ತಿದ್ದಂತೆ ಓವೈಸಿ ಆಕೆಯನ್ನು ತಡೆದಿದ್ದಾರೆ. ಬಳಿಕ ಪೊಲೀಸರು ಕೂಡಲೇ ಅಮೂಲ್ಯಳನ್ನು ವೇದಿಕೆಯಿಂದ ಕರೆದುಕೊಂಡು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಯುವತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ರಹಸ್ಯ ಪ್ರದೇಶಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಪಾಕ್ ಪರ ಜೈಕಾರ ಕೂಗಿದ ಅಮೂಲ್ಯಳನ್ನು ಉಪ್ಪಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದರು.