ಕೊರೊನಾ ಜಿಹಾದ್‌ ಶಂಕೆ ವ್ಯಕ್ತಪಡಿಸಿದ ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ: ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ತಬ್ಲಿಗಿ ಸಭೆಯಲ್ಲಿ ಭಾಗವಹಿಸಿ ಬಂದವರು ಎಲ್ಲೆಡೆ ಕೊರೊನಾ ಜಿಹಾದ್ ಮಾಡುತ್ತಿರುವ ಶಂಕೆ ಇದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ತಬ್ಲಿಗ್ ಸಭೆಯಲ್ಲಿ ಭಾಗವಹಿಸಿ ಬಂದು, ಬೆಳಗಾವಿ ಹಾಗೂ ಬೀದರ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಅಲ್ಲಿನ ವೈದ್ಯರು ಹಾಗೂ ಶುಶ್ರೂಷಕರಿಗೆ ಸೋಂಕು ಹಬ್ಬಿಸುವುದಾಗಿ ಹೇಳುತ್ತಿರುವುದನ್ನು ನೋಡಿದರೆ ಇದು ಭಯೋತ್ಪಾದಕತೆಯ ಮುಂದುವರಿದ ಭಾಗವಾಗಿ ಕಾಣುತ್ತಿದೆ ಎಂದರು.

ಸೋಂಕು ಹರಡಲು ಯತ್ನಿಸುತ್ತಿರುವವರಿಗೆ ಸದ್ಯ ಕ್ವಾರಂಟೈನ್‌ನಲ್ಲಿಟ್ಟು ಚಿಕಿತ್ಸೆ ನೀಡಿ, ಮುಂದೆ ಜೀವಾವಧಿ ಶಿಕ್ಷೆ ವಿಧಿಸಬೇಕು. ಇದಕ್ಕೆ ಪೂರಕವಾಗಿ ಕಾನೂನು ತಿದ್ದುಪಡಿ ತರಬೇಕು ಎಂದು ಶೋಭಾ ಒತ್ತಾಯಿಸಿದರು.

ಬೆಂಗಳೂರಿನ ಸಿದ್ದಿಕ್‌ ಲೇಔಟ್‌ನಲ್ಲಿ ಆಶಾ ಕಾರ್ಯಕರ್ತೆಯ ಮೇಲೆ ನಡೆದ ಹಲ್ಲೆ ಹಿಂದೆಯೂ ತಬ್ಲಿಗ್‌ ಸಭೆಯಲ್ಲಿ ಭಾಗವಹಿಸಿದ್ದವರ ಕೈವಾಡ ಶಂಕೆ ಇದೆ. ಒಂದು ಸಮುದಾಯದವರು ಮಾತ್ರ ರಾಜ್ಯದ ಕಾನೂನು ಹಾಗೂ ಸರ್ಕಾರ, ಪೊಲೀಸ್‌, ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸುತ್ತಿಲ್ಲ. ಇಂಥವರನ್ನು ದೇಶದ್ರೋಹಿಗಳು ಎಂದು ಪರಿಗಣಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.

ಎಚ್‌ಡಿಕೆಗೆ ತಿರುಗೇಟು

ಭಾನುವಾರ ರಾತ್ರಿ 9ಗಂಟೆಗೆ ದೀಪ ಬೆಳಗಿಸುವಂತೆ ಪ್ರಧಾನಿ ಮೋದಿ ಕರೆ ನೀಡಿರುವುದು ಜನರ ಮನಸ್ಸಿಗೆ ಶಕ್ತಿ ತುಂಬಲು, ಕೊರೊನಾ ಜಾಗೃತಿ ಉದ್ದೀಪನಗೊಳಿಸಲು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದಂತೆ ಬಿಜೆಪಿ ಸಂಸ್ಥಾಪನಾ ದಿನ ಮುಂದಿಟ್ಟುಕೊಂಡಲ್ಲ ಎಂದು ತಿರುಗೇಟು ನೀಡಿದರು. 

Leave a Reply

Your email address will not be published. Required fields are marked *

error: Content is protected !!