ಶಿವಳ್ಳಿ ಸಮಾಜ ಒಗ್ಗೂಡಿಸುವ ವಿಶ್ವ ಸಮ್ಮೇಳನ: ಪಲಿಮಾರು ಶ್ರೀ
ಉಡುಪಿ: ಶಿವಳ್ಳಿ ಬ್ರಾಹ್ಮಣ ಸಮಾಜವನ್ನು ಒಗ್ಗೂಡಿಸುವಂತಹ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನ ಕೃಷ್ಣನ ಸನ್ನಿಧಿಯಲ್ಲಿ ನಡೆಯುತ್ತಿರುವುದು ವಿಶ್ವಕ್ಕೆ ಖುಷಿ ನೀಡುವ ವಿಚಾರ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದರು.
ಕೃಷ್ಣಮಠದ ರಾಜಾಂಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಅಂಗವಾಗಿ ಶುಕ್ರವಾರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು
ಶಿವಳ್ಳಿ ಬ್ರಾಹ್ಮಣರು ಸಾವಿರ ಕಂಬಗಳ ಮಂಟಪವಿದ್ದಂತೆ. ಬ್ರಾಹ್ಮಣರೆಲ್ಲರೂ ಆಧಾರ ಸ್ತಂಭಗಳಿದ್ದಂತೆ. ಒಂದು ಕಂಬ ಬಿದ್ದರೆ ಮಂಟಪ ಬೀಳುವಂತೆ, ಸಮಾಜ ಬೀಳಬೇಕಾಗುತ್ತದೆ. ಇದಕ್ಕೆ ಅವಕಾಶ ಕೊಡಬಾರದು. ಈ ಸಮ್ಮೇಳನ ಶಿವಳ್ಳಿ ಬ್ರಾಹ್ಮಣರ ಪ್ರತೀಕವನ್ನು ಜಗತ್ತಿಗೆ ಸಾರುತ್ತಿದೆ ಎಂದು ಶ್ರೀಗಳು ಹೇಳಿದರು.
ಬ್ರಾಹ್ಮಣರ ಸಮಾಜದ ಯಾವ ಮುಖಂಡರ ಹೆಸರನ್ನು ಪ್ರಸ್ತಾಪಿಸದೆ, ಶಿವಳ್ಳಿ ಬ್ರಾಹ್ಮಣ ಸಮಾಜದ ಹೆಸರಿನಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಸಮಾಜ ಪಾಲ್ಗೊಂಡು ಪ್ರೀತಿ ತೋರಿಸಬೇಕು ಎಂದರು.
ಭೀಮನಕಟ್ಟೆ ಮಠಾಧೀಶರಾದ ರಘುವರೇಂದ್ರ ತೀರ್ಥರು ಮಾತನಾಡಿ, ಅನ್ಯ ಸಮುದಾಯದವರು ಸಮ್ಮೇಳನ ಮಾಡಿ ಕೇವಲ ವೈಭವ ತೋರಿಸುತ್ತಾರೆ. ಆದರೆ, ನಾವಿಲ್ಲಿ ಸಮ್ಮೇಳನದ ಮೂಲಕ ಕ್ಷೀಣವಾಗಿರುವ ನಮ್ಮ ತೌಳವ ಸಂಸ್ಕೃತಿ, ಸಂಸ್ಕಾರವನ್ನು ತೋರಿಸುತ್ತಿದ್ದು, ಇದನ್ನು ಮತ್ತಷ್ಟು ಗಟ್ಟಿಗೊಳಿಸುವ ಕೆಲಸ ಮಾಡಬೇಕು ಎಂದರು.
ನಮ್ಮ ತೌಳವ ಸಂಸ್ಕೃತಿಯಲ್ಲಿ ಹಲವು ಮಹನೀಯ ಸ್ವಾಮೀಜಿಗಳಿದ್ದಾರೆ. ಆದರೆ, ಗುರುಮಠದ ಬಗ್ಗೆ ಭಕ್ತರಿಗೆ ಶ್ರದ್ಧೆ ಕ್ಷೀಣವಾಗಿದೆ. ಹೆಸರಿಗೆ ಮಾತ್ರ ಮಠ ಎಂಬಂತಾಗಿದೆ. ಮಠದ ಸ್ವಾಮೀಜಿಗಳ ಹಿರಿಯ ಸಾಧನೆಯೇ ನಮ್ಮವರಿಗೆ ತಿಳಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಾಜದಲ್ಲಿರುವ ಅಜ್ಞಾನ ದೂರವಾಗಬೇಕು. ಶಿವಳ್ಳಿ ಇತಿಹಾಸ ಪ್ರಸಿದ್ಧ ಸ್ಥಳ. ಮಧ್ವಾಚಾರ್ಯರು ಹುಟ್ಟಿ ಬಂದ ಪುಣ್ಯಭೂಮಿ. ಈ ಸ್ಥಳದ ಮಹತ್ವ ಮುಂದಿನ ಪೀಳಿಗೆಗೆ ತಿಳಿಯಬೇಕಾದರೆ ಇಂತಹ ಸಮ್ಮೇಳನಗಳು ನಡೆಯಬೇಕು. ಮಧ್ವಾಚಾರ್ಯರ ಮಹತ್ವ, ಅವರ ವಿಚಾರಧಾರೆಗಳನ್ನು ಅರಿಯದಿದ್ದರೆ ಸುಧಾರಣೆ ಸಾಧ್ಯವಿಲ್ಲ ಎಂದರು.
ಸಮ್ಮೇಳನ ಶಿವಳ್ಳಿ ಬ್ರಾಹ್ಮಣರ ಸಂಪತ್ತು ಪ್ರದರ್ಶಿಸುವ ಸಮ್ಮೇಳನವಲ್ಲ. ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ವೇದಿಕೆಯಾಗಲಿ. ಸಮಾಜ ಒಗ್ಗೂಡಲು ಕೃಷ್ಣದೇವರ ಆಶ್ರಯ ಸಿಕ್ಕಿದೆ. ಮಧ್ವಾಚಾರ್ಯರು ಮಾತನಾಡುವ ತುಳು ಭಾಷೆ ಮಾತನಾಡುವುದೇ ಹೆಮ್ಮೆಯ ಸಂಗತಿ ಎಂದರು.
ಉದ್ಯಮಿ ರಾಮದಾಸ ಮಡಮಣ್ಣಾಯ ಮಾತನಾಡಿ, ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸುವ ಗುಣ ಶಿವಳ್ಳಿ ಬ್ರಾಹ್ಮಣರಲ್ಲಿದೆ. ಸಾಧನೆಗೆ ಸೂಕ್ತ ಶಿಕ್ಷಣ ನೀಡಬೇಕು. ಸ್ವಂತ ಉದ್ದಿಮೆ ಸ್ಥಾಪಿಸಲು ಪ್ರಯತ್ನಿಸಬೇಕು ಎಂದು ಆಶಿಸಿದರು.
ಪಲಿಮಾರು ಕಿರಿಯ ಯತಿ ವಿದ್ಯಾರಾಜೇಶ್ವರತೀರ್ಥರು, ಸಮ್ಮೇಳನದ ಅಧ್ಯಕ್ಷ ರಾಮದಾಸ ಮಡಮಣ್ಣಾಯ, ಡಾ.ಬಾಲಕೃಷ್ಣ ಮೂಡಂಬಡಿತ್ತಾಯ, ಪ್ರಧಾನ ಸಂಚಾಲಕ ಎಂ.ಬಿ.ಪುರಾಣಿಕ್, ಕಾರ್ಯಾಧ್ಯಕ್ಷರಾದ ಮಂಜುನಾಥ ಉಪಾಧ್ಯಾಯ, ಪರ್ಯಾಯ ಮಠದ ಪಿಆರ್‌ಒ ಶ್ರೀಶ ಭಟ್ ಕಡೆಕಾರ್ ಉಪಸ್ಥಿತರಿದ್ದರು.
ಗಮನ ಸೆಳೆದ ಛಾಯಾಚಿತ್ರ ಪ್ರದರ್ಶನ
ಸಮ್ಮೇಳನ ಅಂಗವಾಗಿ ರಾಜಾಂಗಣದಲ್ಲಿ ಆಯೋಜಿಸಿದ್ದ ‘ಸುವರ್ಣ ಪರ್ಯಾಯ ದರ್ಶನ’ ಛಾಯಾಚಿತ್ರಗಳ ಪ್ರದರ್ಶನ ಗಮನ ಸೆಳೆಯುತ್ತಿದೆ. ಪರ್ಯಾಯ ಮಹೋತ್ಸವ, ಯತಿಗಳ ಕೃಷ್ಣಪೂಜೆ, ಉತ್ಸವ, ಹಬ್ಬ ಹರಿದಿನಗಳಲ್ಲಿ ಕೃಷ್ಣನಿಗೆ ಮಾಡಿದ ಬಗೆಬಗೆಯ ಅಲಂಕಾರ, ರಥೋತ್ಸವ, ಮಧ್ವಸರೋವರ, ಭಜನೆ, ಚಿಣ್ಣರ ಮಾಸೋತ್ಸವ, ತೆಪ್ಪೋತ್ಸವ, ವಿಟ್ಲಪಿಂಡಿ ಉತ್ಸವ, ಪರ್ಯಾಯ ಪೀಠಾಧಿಪತಿಗಳ ಪುರ ಪ್ರವೇಶ, ಹೊರೆ ಕಾಣಿಕೆ ಸಲ್ಲಿಕೆ, ಭತ್ತದ ಮುಡಿ ಮೆರವಣಿಗೆ, ಲಕ್ಷ ದೀಪೋತ್ಸವ, ಬಾಬಾ ರಾಮ್‌ದೇವ್ ಯೋಗ ಶಿಬಿರ, ಪಲಿಮಾರು ಕಿರಿಯ ಯತಿಗಳ ಪಟ್ಟಾಭಿಷೇಕ, ಸರ್ವಜ್ಞ ಪೀಠ, ಅಷ್ಠಮಠಗಳ ಯತಿಗಳ ಉಪಸ್ಥಿತಿಯ ಅಪರೂಪದ ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ