ಶಿರ್ವ ರೋಟರಿ ಕ್ಲಬ್ : “ಆಟಿಯಲ್ಲೊಂದು ದಿನ”

ಪ್ರಕೃತಿಯಲ್ಲಿ ಕಾಲಕ್ಕನುಗುಣವಾಗಿ ಬೆಳೆಯುವ ನೂರಾರು ಸಸ್ಯಗಳಲ್ಲಿ ಸಮೃದ್ಧ ಔಷಧೀಯ ಅಂಶಗಳಿದ್ದು ಹಿಂದಿನವರು ಸಸ್ಯಗಳ ಸೊಪ್ಪು, ಬೇರು, ಕಾಯಿ, ಸಿಪ್ಪೆಗಳನ್ನು ಬಳಸಿ ಆರೋಗ್ಯಪೂರ್ಣ ಜೀವನ ನಡೆಸುತ್ತಿದ್ದರು. ನಮ್ಮ ಪರಿಸರದಲ್ಲಿ ಬೆಳೆಯುವ ನೂರಾರು ಸಸ್ಯಗಳು ಹಿರಿಯರ ಆರೋಗ್ಯ ವರ್ಧಕ ಔಷಧಿಯಾಗಿದ್ದವು ಎಂದು ಉಡುಪಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಗೀತಾ ವಾಗ್ಲೆ ಹೇಳಿದರು.

ಶಿರ್ವ ಪಂಜಿಮಾರು ಪ್ರಗತಿಪರ ಕೃಷಿಕ ರೊನಾಲ್ಡ್ ಡಿಸೋಜ ಅವರ ಮನೆಯಲ್ಲಿ ಭಾನುವಾರ ಶಿರ್ವ ರೋಟರಿ ವತಿಯಿಂದ ಏರ್ಪಡಿಸಿದ್ದ “ಆಟಿಯಲ್ಲೊಂದು ದಿನ” ಕಾರ್ಯಕ್ರಮವನ್ನು ಕಲಶೆಗೆ ಭತ್ತ ಸುರಿಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಆಟಿ ತಿಂಗಳು ಕೃಷಿಕರ ಪಾಲಿನ ಅತ್ಯಂತ ಕಷ್ಟಕರ ತಿಂಗಳಾಗಿದ್ದು, ಬೇರೆ ವಿಧಿಯಿಲ್ಲದೆ ಆಹಾರಕ್ಕಾಗಿ ಬಳಸಿದ ಸೊಪ್ಪು, ಬೇರು, ಗೆಡ್ಡೆಗೆಣಸು ತಿನಿಸುಗಳು  ಈಗ ಸಂಭ್ರಮವಾಗಿ ಆಚರಿಸುತ್ತಿರುವುದು ನಮ್ಮ ಮಕ್ಕಳಿಗೆ ಹಿರಿಯರ ಜೀವನ ಕ್ರಮ ಪರಿಚಯಿಸುವಲ್ಲಿ ವೇದಿಕೆಯಾಗಿದೆ ಎಂದು ಹೇಳಿದರು.

ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನಿಂದ “ಸಾಧಕ ರತ್ನ ಪ್ರಶಸ್ತಿ” ಪುರಸ್ಕೃತ ಸಮಾಜ ಸೇವಕ ಫಾರೂಕ್ ಚಂದ್ರನಗರ ಅವರನ್ನು ಸನ್ಮಾನಿಸಲಾಯಿತು.

ರೋಟರಿ ಕ್ಲಬ್ ಸದಸ್ಯರಿಗೆ ಆಟಿ ತಿಂಗಳ ವಿಷಯದಲ್ಲಿ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಯಿತು. ಗದ್ದೆಯಲ್ಲಿ ನಾನಾ ಸ್ಪರ್ಧೆಗಳು ಜರುಗಿದವು. ರೋಟರಿ ಕ್ಲಬ್ ನ ಸದಸ್ಯರೇ ತಯಾರಿಸಿದ 31 ಬಗೆಯ ಆಟಿ ತಿಂಗಳ ಖಾದ್ಯಗಳು ಮಧ್ಯಾಹ್ನದ ಸೌಹಾರ್ದ ಭೋಜನ ಕೂಟದಲ್ಲಿ ಮೇಳೈಸಿದವು.

ಶಿರ್ವ ರೋಟರಿ ಕ್ಲಬ್ ಅಧ್ಯಕ್ಷ ಸುನೀಲ್ ಕಬ್ರಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯತ್ ಸದಸ್ಯ ಮೈಕಲ್ ಡಿಸೋಜಾ, ರೀತಾ ಡಿಸೋಜ, ರೋನಾಲ್ಡ್ ಡಿಸೋಜ ಉಪಸ್ಥಿತರಿದ್ದರು.

ದಿವಾಕರ ಶೆಟ್ಟಿ ಪ್ರೊಫೆಸರ್ ವಿಠ್ಠಲ ನಾಯಕ್ ಪರಿಚಯಿಸಿದರು. ವೀಣಾ ಡಿಸೋಜಾ ಸಹಕರಿಸಿದರೆ, ಮೆಲ್ವಿನ್ ಡಿಸೋಜ ಸ್ಪರ್ಧೆಗಳನ್ನು ನಡೆಸಿದರು.

ರೋಟರಿ ಕಾರ್ಯದರ್ಶಿ ವಿಷ್ಣುಮೂರ್ತಿ ಸರಳಾಯ ವಂದಿಸಿದರೆ, ದೆಂದೂರು ದಯಾನಂದ ಶೆಟ್ಟಿ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!