ಶಿರ್ವ: ಕಥೋಲಿಕ್ ಸಭಾ ಮತ್ತು ಸ್ವಾಕ್ ವತಿಯಿಂದ ಕಿಟ್ ವಿತರಣೆ
ಶಿರ್ವ : ಕೊರೋನ ಮಹಾಮಾರಿಯಿಂದ ಕಷ್ಟದಲ್ಲಿರುವವರಿಗೆ ಸ್ಪಂದಿಸುವುದಾಕ್ಕಾಗಿ ಶಿರ್ವ ಆರೋಗ್ಯ ಮಾತೆ ದೇವಾಲಯದ ವ್ಯಾಪ್ತಿಯಲ್ಲಿರುವ ಕಥೋಲಿಕ್ ಸಭಾ ಮತ್ತು ಸ್ವಾಕ್ ವತಿಯಿಂದ ಅತಿ ಅಗತ್ಯವಿರುವವರಿಗೆ ಇಂದು ಕಿಟ್ ವಿತರಣೆ ಮಾಡಲಾಯಿತು.
ಶಿರ್ವ ದೇವಾಲಯದ ವಠಾರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಿರ್ವ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಂತೋಷ್, ಕೋರೊನ ಬಗ್ಗೆ ಭಯ ಬೇಡ, ಜಾಗೃತಿ ವಹಿಸಿ ಎಂದು ಸರ್ವರಲ್ಲೂ ಮನವಿ ಮಾಡಿ ಎಂದರಲ್ಲದೆ, ಕೋರೋನ ಬಗ್ಗೆ ಮಾಹಿತಿಯನ್ನು ನೀಡಿದರು.
ಜೊತೆಗೆ ಕೆಲವೊಂದು ಮಾಸ್ಕ್ ಗಳನ್ನು ಕೂಡ ವಿತರಿಸಿದರು. ಶಿರ್ವ ದೇವಾಲಯದ ಪ್ರಧಾನ ಧರ್ಮಗುರು ವಂ. ಫಾ. ಡೆನಿಸ್ ಡೇಸಾ, ಕಥೋಲಿಕ್ ಸಭಾ ಮತ್ತು ಸ್ವಾಕ್ ನ ಸೇವೆಯನ್ನು ಮೆಚ್ಚಿ ಅಭಿನಂದಿಸಿದರು ಮತ್ತು ಅಕ್ಕಿ ಸಹಿತ ದಿನಸಿ ವಸ್ತುಗಳ ಮೇಲೆ ಆಶೀರ್ವಚನ ಮಾಡಿದರು. ಬಳಿಕ ಶಿರ್ವ ದೇವಾಲಯದ ವ್ಯಾಪ್ತಿಯ ಜಾತಿ ಮತ ಭೇದವಿಲ್ಲದೆ ಕಥೊಲಿಕ್ ಸಭಾ ಮತ್ತು ಸ್ವಾಕ್ ಸಂಘಟನೆಗಳು ಗುರುತಿಸಿದ್ದ ಅತಿ ಅಗತ್ಯವಿರುವ 125 ಕುಟುಂಬಗಳಿಗೆ ಅಕ್ಕಿ ಸಹಿತ ದಿನ ಬಳಕೆಯ ದಿನಸಿ ವಸ್ತುಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರು ಫಾ. ಅಶ್ವಿನ್ ಆರಾನ್ನ, ಶಿರ್ವ ಪಂಚಾಯತ್ ಪಿಡಿಒ ಅನಂತ ಪದ್ಮನಾಭ, ವಿಎ ರಾಜು, ಜಿಲ್ಲಾ ಪಂಚಾಯತ್ ಸದಸ್ಯ ವಿಲ್ಸನ್ ರೋಡ್ರಿಗಸ್, ದೇವಾಲಯದ ಆರ್ಥಿಕ ಸಮಿತಿಯ ಕಾರ್ಯದರ್ಶಿ ಲೀನಾ ಮಚಾದೊ, ಪ್ರಮುಖರಾದ ಮೆಲ್ವಿನ್ ಡಿಸೋಜ, ಜೋಸೆಫ್ ಕಾಸ್ತಲಿನೊ, ಕಥೋಲಿಕ್ ಸಭಾ ಮತ್ತು ಸ್ವಾಕ್ ಸಂಘಟನೆಯ ಪದಾಧಿಕಾರಿಗಳು, ವಿವಿಧ ವಾಳೆಯ ಗುರಿಕಾರರು ಉಪಸ್ಥಿತರಿದ್ದರು.ಮೆಲ್ವಿನ್ ಅರಾನ್ನ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.