ಶೆಫಿನ್ಸ್: ಇಂಗ್ಲಿಷ್ ದ್ವಿತೀಯ ಬ್ಯಾಚ್ ತರಬೇತುದಾರರ ತರಬೇತಿ ಸಂಪನ್ನ

ಉಡುಪಿ ನ. 18: ಸ್ಪೋಕನ್ ಇಂಗ್ಲಿಷ್ ತರಬೇತಿಯಲ್ಲಿ ಪ್ರಸಿದ್ದಿ ಪಡೆದ ಮಣಿಪಾಲದ ಶೆಫಿನ್ಸ್ ಪ್ರೆಸಿಡಿಯಂ, ಉಡುಪಿ ಜಿಲ್ಲಾ ಸರಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಉಚಿತ ಸ್ಪೋಕನ್ ಇಂಗ್ಲಿಷ್ ತರಬೇತಿ ನೀಡುವ ಕಾರ್ಯಕ್ರಮದ ಅಂಗವಾಗಿ ತರಬೇತಿ ನೀಡಲಿರುವ ಶಿಕ್ಷಕಿಯರಿಗೆ ಐದು ದಿನಗಳ ಉಚಿತ ಸ್ಪೋಕನ್ ಇಂಗ್ಲಿಷ್ ತರಬೇತಿಯ ದ್ವಿತೀಯ ಬ್ಯಾಚಿನ ಕಾರ್ಯಾಗಾರವು ಸಂಪನ್ನಗೊಂಡಿತು. ಇಲ್ಲಿ ತರಬೇತಾದ ಮಹಿಳೆಯರಿಗೆ 2020 ಮೇ ತಿಂಗಳ ವರೆಗೆ ಪ್ರತಿ ದಿನ ವಾಟ್ಸಾಪ್ ಮೂಲಕ ತರಬೇತಿ ಹಾಗೂ ತಿಂಗಳಿಗೊಂದು ದಿನ ನೇರ ತರಬೇತಿ ನೀಡಲಾಗುವುದು.

ಉಡುಪಿ ಜಿಲ್ಲೆಯ ವಿವಿಧ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಪಣತೊಟ್ಟು ಸ್ಪೋಕನ್ ಇಂಗ್ಲಿಷ್ ಕಲಿಯಲು ಆಗಮಿಸಿದ ದ್ವಿತೀಯ ಬ್ಯಾಚಿನ ಹದಿನೆಂಟು ಜನ ಮಹಿಳೆಯರಿಗೆ ಉಚಿತವಾಗಿ ಐದು ದಿನಗಳ ಕಾಲ ತರಬೇತಿ ನೀಡಲಾಯಿತು. ಈ ಮಹಿಳೆಯರು ಅವರಿಗಿಷ್ಟವಾದ ಸರಕಾರಿ/ ಅನುದಾನಿತ ಶಾಲೆಗಳ ಒಂದನೇ ತರಗತಿಯಿಂದ 7ನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ವರ್ಷಾಂತ್ಯದ ವರೆಗೆ ವಾರಕ್ಕೆರಡು ದಿನದಂತೆ ಸ್ಪೋಕನ್ ಇಂಗ್ಲಿಷ್ ತರಬೇತಿ ನೀಡಲಿದ್ದಾರೆ.

“ಕನ್ನಡ ಮಾಧ್ಯಮದಲ್ಲಿ ಕಲಿತ ನಮಗೆ ಹೊರದೇಶದ ಭಾಷೆಯಾದ ಇಂಗ್ಲಿಷ್ ಕಲಿಯುವುದು ಅಷ್ಟು ಸುಲಭವಲ್ಲ. ಆದರೆ ಸತತ ಪರಿಶ್ರಮದಿಂದ ಇದನ್ನು ಸಾಧಿಸಬಹುದು. ವಿದ್ಯಾರ್ಥಿಗಳಲ್ಲಿ ಸಣ್ಣ ಪ್ರಾಯದಿಂದಲೇ ಆಂಗ್ಲ ಭಾಷೆಯ ಸಂವಹನ ಕಲಿಸುವ ಶೆಫಿನ್ಸ್ ನ ಕೆಲಸ ನಿಜಕ್ಕೂ ಶ್ಲಾಘನೀಯ. ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳ ವಿದ್ಯಾವಂತ ಮಹಿಳೆಯರನ್ನು ಆರಿಸಿ, ಅವರಿಗೆ ಸ್ಪೋಕನ್ ಇಂಗ್ಲಿಷ್ ಕಲಿಸಿ, ಅವರ ಮೂಲಕ ಮಕ್ಕಳಿಗೆ ಕಲಿಸುವುದರಿಂದ ಮಹಿಳಾ ಸಬಲೀಕರಣ ಹಾಗೂ ಮಕ್ಕಳ ಸಬಲೀಕರಣ ಜೊತೆಯಲ್ಲೇ ಸಾಧಿಸಿದಂತಾಗುತ್ತದೆ” ಎಂದು ಮುಖ್ಯ ಅತಿಥಿ ಸವಿತಾ ಎರ್ಮಾಳ್ ಹೇಳಿದರು.

ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ್ದ ರೊಟೇರಿಯನ್ ರಾಜವರ್ಮ ಆರಿಗ ಇವರು ರೋಟರಿ ಕ್ಲಬ್ ಗಳು ಮಾಡುತ್ತಿರುವ ಸಮಾಜಸೇವೆಗಳನ್ನು ನೆನಪಿಸಿ, ಇಂತಹದೇ ಕಾರ್ಯಕ್ಕೆ ಮುಂದಾಗಿರುವ ಶೆಫಿನ್ಸ್ ನ ಸೇವಾ ಮನೋಭಾವವನ್ನು ಶ್ಲಾಘಿಸಿ, ಈಗಾಗಲೇ ಸರಳೇಬೆಟ್ಟು ಸರಕಾರಿ ಪ್ರಾಥಮಿಕ ಶಾಲೆಯನ್ನು ತಾವು ಈ ಕಾರ್ಯಕ್ರಮಕ್ಕಾಗಿ ಪ್ರಾಯೋಜಿಸುತ್ತಿದ್ದು, ಇನ್ನು ಮುಂದಕ್ಕೂ ತಮ್ಮ ಸಹಕಾರ ಕೊಡಲಿರುವುದಾಗಿಯೂ, ಹಾಗೆಯೇ ಸಮಾಜ ಸೇವಾ ಸಂಘ ಸಂಸ್ಥೆಗಳು ಶೆಫಿನ್ಸ್ ನೊಂದಿಗೆ ಈ ಕಾರ್ಯಕ್ರಮದ ಸರ್ವ ಯಶಸ್ಸಿಗೆ ಕೈಜೋಡಿಸಬೇಕೆಂದೂ ಕರೆ ನೀಡಿದರು.

ಈ ರೀತಿಯ ತರಬೇತಿಯಿಂದ ಈ ವರ್ಷ ಉಡುಪಿ ಜಿಲ್ಲೆಯ ಎಲ್ಲಾ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳನ್ನು ಸಂಪೂರ್ಣ ಉಚಿತವಾಗಿ ತರಬೇತಿಗೊಳಿಸುವ ಬಹುದೊಡ್ಡ ಗುರಿಯನ್ನು ಶೆಫಿನ್ಸ್ ಇಟ್ಟುಕೊಂಡಿದ್ದು, ತರಬೇತಿಯನ್ನು 1-3, 4-5 ಮತ್ತು 6-7 ಹೀಗೆ ಮೂರು ವಿಭಾಗಗಳಿಗೆ ಶೆಫಿನ್ಸ್ ತನ್ನ ಅನುಭವದ ಆಧಾರದ ಮೇಲೆ ಸಂಶೋಧಿಸಿ ಬರೆಯಲಾದ ವಿಭಿನ್ನ ಪಠ್ಯ ಪುಸ್ತಕಗಳ ಮೂಲಕ ನಡೆಸಲಾಗುತ್ತಿದ್ದು, ಈ ಪಠ್ಯ ಪುಸ್ತಕಗಳನ್ನು ಮಕ್ಕಳಿಗೆ ಒದಗಿಸಿಕೊಡಲು ಸಾರ್ವಜನಿಕರ ಮತ್ತು ಸಂಘ-ಸಂಸ್ಥೆಗಳ ಸಹಕಾರ ಕೋರಲಾಗಿದೆ. ಈಗಾಗಲೇ ಎರಡು ಬ್ಯಾಚ್ ಗಳಲ್ಲಿ ಒಟ್ಟು 33 ಮಹಿಳೆಯರನ್ನು ತರಬೇತಿಗೊಳಿಸಿದ್ದು, ಅವರುಗಳಿಗೆ ಅನುಕೂಲವಾದ ಶಾಲೆಗಳಲ್ಲಿ ಸದ್ಯದಲ್ಲೇ ತರಬೇತಿಗಳು ಆರಂಭಗೊಳ್ಳಲಿವೆ. ಮಹಿಳೆಯರ ಉಚಿತ ತರಬೇತಿಯ ಮುಂದಿನ ಬ್ಯಾಚ್ ಸದ್ಯದಲ್ಲೇ ನಡೆಯಲಿದ್ದು, ಈ ಕುರಿತ ವಿವರಗಳಿಗೆ www.shefins.com ಸಂದರ್ಶಿಸಬಹುದಾಗಿದೆ ಎಂದು ಶೆಫಿನ್ಸ್ ನಿರ್ದೇಶಕ ಮತ್ತು ಪ್ರಧಾನ ತರಬೇತುದಾರ ಮನೋಜ್ ಕಡಬ ಹೇಳಿದರು.

ಉಡುಪಿಯ ಹಿಂದೀ ಪ್ರಚಾರ ಸಮಿತಿಯಲ್ಲಿ ನಡೆದ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಬ್ರಹ್ಮಾವರ ಸರಕಾರಿ ಪದವೀಪೂರ್ವ ಕಾಲೇಜಿನ ರಾಜ್ಯ ಪ್ರಶಸ್ತಿ ವಿಜೇತ ಇಂಗ್ಲಿಷ್ ಉಪನ್ಯಾಸಕಿ ಹಾಗೂ ಭಾರತ ಸರಕಾರದ ರಾಷ್ಟ್ರೀಯ ಯುವ ನಾಯಕತ್ವ ಪ್ರಶಸ್ತಿ ವಿಜೇತೆ ಸವಿತಾ ಎರ್ಮಾಳ್ ಹಾಗೂ ಗೌರವ ಅತಿಥಿಯಾಗಿ ರೋಟರಿ ಕ್ಲಬ್ ಉಡುಪಿ ಮಣಿಪಾಲದ ಅಧ್ಯಕ್ಷ ರೊಟೇರಿಯನ್ ರಾಜವರ್ಮ ಆರಿಗ ಭಾಗವಹಿಸಿದ್ದು, ಶೆಫಿನ್ಸ್ ಸಹನಿರ್ದೇಶಕಿ ಶೆರ್ಲಿ ಮನೋಜ್ ಅಧ್ಯಕ್ಷತೆ ವಹಿಸಿದ್ದು, ಶೆಫಿನ್ಸ್ ನಿರ್ದೇಶಕ ಮನೋಜ್ ಕಡಬ, ತರಬೇತುದಾರರಾದ ಜಸ್ನಾ ಸುಧೀಶ್ ಮತ್ತು ಮಾನಸ ಹಾಸನ್ ಉಪಸ್ಥಿತರಿದ್ದರು. ಸಂಪೂರ್ಣ ಕಾರ್ಯಕ್ರಮವನ್ನು ಸವಿತಾ ಹಿರೇಮಠ್ ನೀತೃತ್ವದಲ್ಲಿ ಶಿಬಿರಾರ್ಥಿಗಳು ನಿರ್ವಹಿಸಿದ್ದು, ದಿವ್ಯಾ ಕಾರ್ಯಕ್ರಮ ನಿರೂಪಿಸಿ, ಸೌಮ್ಯ ಸ್ವಾಗತಿಸಿ, ರಂಜಿತಾ, ವೈಶಾಲಿ, ಪಾರ್ವತಿ ಅತಿಥಿಗಳನ್ನು ಪರಿಚಯಿಸಿ, ಪ್ರೀತಿ ವಂದಿಸಿದರು

Leave a Reply

Your email address will not be published. Required fields are marked *

error: Content is protected !!