ಹಸಿದ ಹೊಟ್ಟೆಗೆ ಅನ್ನ ನೀಡಿ ಮಾನವೀಯತೆ ಮೆರೆಯುತ್ತಿರುವ ಜಿಲ್ಲಾ ಪಂಚಾಯತ್ ಸದಸ್ಯೆ

ಕಟಪಾಡಿ : (ಉಡುಪಿ ಟೈಮ್ಸ್ ವರದಿ) ಮಹಾಮಾರಿ ಕೊರೋನ ವೈರಸ್ ನಿಂದ ವಿಶ್ವವೇ ತತ್ತರಿಸಿ ಹೋಗಿದೆ. ನಮ್ಮ ದೇಶವು ಇದೀಗ ಲಾಕ್ ಡೌನ್ ಆಗಿದೆ. ಕಡು ಬಡತನ ಹೊಂದಿದ ಮತ್ತು ದಿನಗೂಲಿ ನೌಕರರ ಮನೆಯವರು ಕಷ್ಟದ ಪರಿಸ್ಥಿತಿಯಿಂದ ತತ್ತರಿಸುತ್ತಿದ್ದಾರೆ. ಒಂದು ಕಡೆ ಮಹಾಮಾರಿ ಕೊರೋನ ವೈರಸ್ ನಿಂದ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದ್ದಂತೆ, ಮತ್ತೊಂದೆಡೆ ಹಸಿದ ಹೊಟ್ಟೆಗೆ ಊಟದ ವ್ಯವಸ್ಥೆ ಮತ್ತು ದಿನ ಬಳಕೆ ಔಷಧಿ ಕೊಡುವ ಕೆಲಸವೂ ವಿವಿಧ ಸಂಘ ಸಂಸ್ಥೆಗಳಿಂದ ನಡೆಯುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಹಲವಾರು ಸಂಘ ಸಂಸ್ಥೆಗಳು, ಸಮಾಜ ಸೇವಕರು, ರಾಜಕೀಯ ಪ್ರಮುಖರು ಬಡ ಜನತೆಗೆ ತಮ್ಮಿಂದಾಗುವ ಸಹಾಯವನ್ನು ಮಾಡುತ್ತಿದ್ದಾರೆ. ಇವರೆಲ್ಲರ ನಡುವೆ ಸದ್ದಿಲ್ಲದೇ ಕಳೆದ ಮೂರು ದಿನಗಳಿಂದ ಕಟಪಾಡಿ ಭಾಗದಲ್ಲಿ ಹಸಿದ ಹೊಟ್ಟೆಗೆ ಊಟದ ವ್ಯವಸ್ಥೆಯನ್ನು ಮಾಡುತ್ತಿರುವ ಜಿಲ್ಲಾ ಪಂಚಾಯತ್ ಸದಸ್ಯೆ ಮಾದರಿಯಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್ ಬಳಿಯಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿರುವ ಜಿಲ್ಲಾ ಪಂಚಾಯತ್ ಸದಸ್ಯೆ ಸಮಾಜ ಸೇವಕಿ ಗೀತಾಂಜಲಿ ಸುವರ್ಣ ಇತರೆಲ್ಲ ರಾಜಕೀಯ ಮುಖಂಡರುಗಳಿಗೆ ಮಾದರಿಯಾಗಿದ್ದಾರೆ. ಓರ್ವ ಗೃಹಿಣಿಯಾಗಿ, ತನ್ನ ಮನೆಯ ಜವಾಬ್ದಾರಿ ಮಾತ್ರವಲ್ಲದೆ, ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ, ತನ್ನ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸರ್ವರ ಜವಾಬ್ದಾರಿ ಹೊತ್ತಿರುವ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಪ್ರಧಾನಿ ನರೇಂದ್ರ ಮೋದಿಯವರ ಕಟ್ಟಾ ಅಭಿಮಾನಿ. ಕೋರೊನ ಮಹಾಮಾರಿಯಿಂದ ತತ್ತರಿಸಿರುವ ದೇಶವನ್ನು ಈಗಾಗಲೇ ಲಾಕ್ ಡೌನ್ ಎಂದು ಘೋಷಿಸಲಾಗಿದ್ದು, ಜನರೆಲ್ಲ ತಮ್ಮ ಸುರಕ್ಷತೆಗಾಗಿ ಮನೆಯೊಳಗಿದ್ದರೆ. ಆದರೆ ದಿನಗೂಲಿ ನೌಕರರು ಮತ್ತು ಆ ಮನೆಯವರು ಮತ್ತು ಬಡ ಕುಟುಂಬಕ್ಕೆ ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೇ ಪರದಾಡುವಂತಹ ಪರಿಸ್ಥಿತಿ ಬಂದಿದೆ.

ಕಟಪಾಡಿ, ಕುರ್ಕಾಲು, ಉದ್ಯಾವರ ಆಸುಪಾಸಿನವರಿಗೆ ತಾವೇ ಸ್ವತಃ ಊಟವನ್ನು ತಯಾರಿಸಿ, ಪ್ಯಾಕ್ ಮಾಡಿ ವಿತರಿಸುತ್ತಿದ್ದಾರೆ. ತಮ್ಮ ಮನೆಯಲ್ಲಿ ತಮ್ಮ ಪತಿ ಮಹೇಶ್ ಸುವರ್ಣ ಅವರ ಸಂಪೂರ್ಣ ಸಹಕಾರದೊಂದಿಗೆ ಈ ಕೆಲಸವನ್ನು ಆರಂಭಿಸಿದ್ದು, ತಮ್ಮ ಮೂವರು ಮಕ್ಕಳಲ್ಲಿ ಅಭಿರಾಜ್ ಮತ್ತು ಆಶ್ವಿಜ ಸುವರ್ಣ ತಮ್ಮ ತಾಯಿಯ ಕೆಲಸಕ್ಕೆ ಸಂಪೂರ್ಣವಾಗಿ ಸಹಕರಿಸುತ್ತಿದ್ದಾರೆ.


ಕಳೆದ ಮೂರು ದಿನಗಳಿಂದ 500ಕ್ಕೂ ಅಧಿಕ ಮಂದಿಗೆ ಊಟದ ವ್ಯವಸ್ಥೆಯನ್ನು ಮಾಡಿದ ಕೀರ್ತಿ ಗೀತಾಂಜಲಿ ಸುವರ್ಣರವರದು. ಅನ್ನ, ಸಾಂಬಾರು ಮತ್ತು ಪಲಾವ್ ಗಳನ್ನು ಸ್ವತಃ, ತಾವೇ ತಮ್ಮ ಮನೆಯವರೊಂದಿಗೆ ಮತ್ತು ಕೆಲಸದವರೊಂದಿಗೆ ಆಹಾರವನ್ನು ತಯಾರಿಸಿಕೊಂಡು ಶ್ರೀ ಸಾಯಿ ಸಾಂತ್ವನ ತಂಡದೊಂದಿಗೆ ಮತ್ತು ಗುಡ್ಡೆಅಂಗಡಿ ಫ್ರೆಂಡ್ಸ್ ಉದ್ಯಾವರ ಇವರೊಂದಿಗೆ ಮತ್ತು ತಾವೇ ವಿವಿಧ ಸ್ಥಳಗಳಿಗೆ ಭೇಟಿ ಕೊಟ್ಟು ನಿರ್ಗತಿಕರಿಗೆ, ಕಡು ಬಡವರಿಗೆ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ.

ಜನಪ್ರತಿನಿಧಿಯಾಗಿ ಜನರ ಸೇವೆ ಮಾಡುವುದಲ್ಲದೆ, ಲಾಕ್ ಡೌನ್ ಆಗಿ ಮನೆಯಲ್ಲಿ ಕುಳಿತುಕೊಳ್ಳದೆ, ಕಷ್ಟದಲ್ಲಿರುವವರ ಬಡ ಜನತೆಗೆ ತಾವೇ ಸ್ವತಃ ಊಟವನ್ನು ತಯಾರಿಸಿ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.

ಗೀತಾಂಜಲಿ ಸುವರ್ಣ ಅವರನ್ನು ಆದರ್ಶ ವಾಗಿಸಿಕೊಂಡು, ಎಲ್ಲಾ ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲ್ಲೂಕು ಪಂಚಯತ್ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಇಂತಹ ಕೆಲಸ ಮಾಡಿದರೆ ಬಡವರಿಗೆ, ನಿರ್ಗತಿಕರು, ವಲಸೆ ಕಾರ್ಮಿಕರ ಹಸಿದ ಹೊಟ್ಟೆಗೆ ಆಹಾರ ನೀಡಿದಂತಾಗುತ್ತದೆ.

1 thought on “ಹಸಿದ ಹೊಟ್ಟೆಗೆ ಅನ್ನ ನೀಡಿ ಮಾನವೀಯತೆ ಮೆರೆಯುತ್ತಿರುವ ಜಿಲ್ಲಾ ಪಂಚಾಯತ್ ಸದಸ್ಯೆ

Leave a Reply

Your email address will not be published. Required fields are marked *

error: Content is protected !!