ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಕೇಂದ್ರಕ್ಕೆ ಸಂತರಿಂದ ಒಕ್ಕೊರಲ ಒತ್ತಾಯ
ಉಡುಪಿ: ಗೋಹತ್ಯೆ ನಿಷೇಧ, ಏಕರೂಪ ನಾಗರಿಕ ಸಂಹಿತೆ ಜಾರಿ ಹಾಗೂ ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ಜಾರಿಯಾಗಬೇಕು ಎಂಬ ಪ್ರಮುಖ ಮೂರು ನಿರ್ಣಯಗಳನ್ನು ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲಿ ಮಂಗಳವಾರ ನಡೆದ ಸಂತರ ಸಮಾವೇಶದಲ್ಲಿ ತೆಗೆದುಕೊಳ್ಳಲಾಯಿತು. ಈ ನಿರ್ಣಯಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಸಂತರು ಒಕ್ಕೊರಲಿನ ತೀರ್ಮಾನ ತೆಗೆದುಕೊಂಡರು.
ಅಷ್ಠಮಠಗಳ ಮಠಾಧೀಶರು ಹಾಗೂ ನಾಡಿನ ಪ್ರಮುಖ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಸಂತರ ಸಮಾವೇಶದಲ್ಲಿ ಪ್ರಮುಖವಾಗಿ ಗೋಹತ್ಯೆ ನಿಷೇಧ ಕುರಿತು ಚರ್ಚೆಯಾಯಿತು. ಎಲ್ಲ ಸ್ವಾಮೀಜಿಗಳು ಒಟ್ಟಾಗಿ ಗೋಹತ್ಯೆ ನಿಷೇಧಕ್ಕೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಸಮಾವೇಶದಲ್ಲಿ ಮಾತನಾಡಿದ ಯೋಗ ಗುರು ಬಾಬಾ ರಾಮ್ದೇವ್, ಮಧ್ವಾಚಾರ್ಯ, ಶಂಕರಾಚಾರ್ಯ, ರಾಮಾನುಜಾಚಾರ್ಯ ಸೇರಿದಂತೆ ಸಂತಶ್ರೇಷ್ಠರ ಸೈದ್ಧಾಂತಿಕ ವಿಚಾರಧಾರೆಗಳು ಭಿನ್ನವಾದರೂ, ಅವರ ಸಾಧನೆ ಏಕರೂಪದ್ದು ಎಂದು ಶ್ಲಾಘಿಸಿದರು.
ರಾಮ, ಕೃಷ್ಣ, ಹನುಮಂತ ಹಾಗೂ ಅವತಾರ ಪುರುಷರನ್ನು ವಾಚಾಮಗೋಚರವಾಗಿ ನಿಂಧಿಸಿದ ಪೆರಿಯಾರ್ ವಿಚಾರಧಾರೆಗಳ ವಿರುದ್ಧ ಮಾತನಾಡಿದ್ದಕ್ಕೆ ಕೆಲವರು ನನ್ನ ಮೇಲೆ ಮುಗಿಬಿದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ನಿಂಧನೆ, ಹಲ್ಲೆಗೆ ಪ್ರಚೋದನೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
‘ಮಾರ್ಕ್ಸ್ವಾದಿ, ಲೆನಿನ್ವಾದಿ, ಸಮಾಜವಾದಿ ಸೇರಿದಂತೆ ಹಲವು ವಾದಿಗಳು ದೇಶದಲ್ಲಿದ್ದಾರೆ. ಇವರೆ ನಡುವೆ ಧರ್ಮ, ಆಧ್ಯಾತ್ಮವನ್ನು ನಂಬಿರುವ ನಾನು ಆಧ್ಯಾತ್ಮವಾದಿ, ರಾಷ್ಟ್ರವಾದಿ’ ಎಂದು ರಾಮ್ದೇವ್ ಘೋಷಿಸಿಕೊಂಡರು.
‘ಬಹುಜನ ಸಮಾಜವಾದಿ ಪಕ್ಷದವರು ತಮ್ಮನ್ನು ದೇಶದ ಮೂಲನಿವಾಸಿಗಳು ಎಂದು ಬಿಂಬಿಸಿಕೊಳ್ಳುತ್ತಾರೆ. ಬ್ರಾಹ್ಮಣರು ಸೇರಿದಂತೆ ಇತರರು ವಿದೇಶಿ ಮೂಲದವರು ಎಂದು ನಿಂದಿಸುತ್ತಾರೆ. ಭಾರತದಲ್ಲಿರುವ ಪ್ರತಿಯೊಬ್ಬರೂ ದೇಶದ ಮೂಲನಿವಾಸಿಗಳು ಎಂಬ ಸತ್ಯವನ್ನು ಅರಿಯಬೇಕಿದೆ’ ಎಂದು ರಾಮದೇವ್ ತಿರುಗೇಟು ನೀಡಿದರು.
ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ‘ಗೋಹತ್ಯೆ ನಿಷೇಧ ಹಾಗೂ ಗಂಗೆಯ ಶುದ್ಧೀಕರಣ ದೇಶದಲ್ಲಿ ಅಗತ್ಯವಾಗಿ ಆಗಲೇಬೇಕಾದ ಕಾರ್ಯ. ಇದರ ಜತೆಗೆ, ಗೋವನ್ನು ರಾಷ್ಟ್ರ ಪ್ರಾಣಿ ಎಂದು ಘೋಷಿಸಬೇಕು’ ಎಂದು ಒತ್ತಾಯಿಸಿದರು.
‘ನಮ್ಮನ್ನೆಲ್ಲ ಗಂಗೆ ಶುದ್ಧೀಕರಿಸಬೇಕಿತ್ತು. ಆದರೆ, ಇಂದು ಗಂಗೆಯನ್ನು ನಾವೇ ಶುದ್ಧೀಕರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ದೊಡ್ಡ ದುರಂತ ಎಂದು ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದರು.
ಏಕರೂಪ ನಾಗರಿಕ ಸಂಹಿತೆ ಜಾರಿಯೂ ಇಂದಿನ ಅಗತ್ಯ. ದೇಶದ ಏಕತೆಗಾಗಿ, ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರು ಒಟ್ಟಾಗಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಒತ್ತಾಯಿಸಬೇಕು ಎಂದು ಪೇಜಾವರ ಶ್ರೀಗಳ ಆಗ್ರಹಿಸಿದರು.
ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು ಮಾತನಾಡಿ, ‘ಪ್ರಪಂಚದಲ್ಲಿರುವ ಯಾವ ನದಿಗಳಿಗೂ ಸಿಗದ ಪೂಜ್ಯನೀಯ ಸ್ಥಾನ ಭಾರತದ ನದಿಗಳಿಗೆ ಸಿಕ್ಕಿದೆ. ಇಲ್ಲಿರುವ ಪವಿತ್ರ ನದಿಗಳಲ್ಲಿ ಭಕ್ತರು ಭಕ್ತಿಭಾವದಿಂದ ಮಿಂದೇಳುತ್ತಾರೆ. ಜಲವನ್ನು ತೀರ್ಥರೂಪದಲ್ಲಿ ಸ್ವೀಕರಿಸುತ್ತಾರೆ. ಹಾಗಾಗಿ, ಗಂಗಾ ಸೇರಿದಂತೆ ಪ್ರಮುಖ ನದಿಗಳ ಸಂರಕ್ಷಣೆ ಮುಖ್ಯ’ ಎಂದರು.
ಇಷ್ಟರವರೆಗೂ ದೇಶದ ಭೂಪಟಕ್ಕೆ ತಲೆಯೇ ಇರಲಿಲ್ಲ. ಈಗ ಕಾಶ್ಮೀರವನ್ನು ಒಳಗೊಂಡಂತೆ ದೇಶದ ಭೂಪಟ ರಚನೆಯಾಗಿದೆ. ಕಾಶ್ಮೀರಕ್ಕೆ ನೀಡಿದ್ದ 370 ಸ್ಥಾನಮಾನವನ್ನು ರದ್ದುಮಾಡುವ ಮೂಲಕ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಭಾರತಮಾತೆ ತಲೆ ಎತ್ತಿ ನಿಂತಿದ್ದಾಳೆ. ಶೀಘ್ರ ಪಾಕ್ ಆಕ್ರಮಿತ ಕಾಶ್ಮೀರವೂ ಭಾರತಕ್ಕೆ ಸಿಗುವಂತಾಗಲಿ ಎಂದು ಸ್ವಾಮೀಜಿ ಆಶಿಸಿದರು.
ಕೃಷ್ಣಾಪುರ ಮಠದ ವಿದ್ಯಾಸಾಗರ ಸ್ವಾಮೀಜಿ, ಕಾಣಿಯೂರು ಮಠದ ವಿದ್ಯಾವಲ್ಲಭ ಸ್ವಾಮೀಜಿ, ಪೇಜಾವರ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ, ಸೋದೆ ಮಠದ ವಿಶ್ವವಲ್ಲಭ ಸ್ವಾಮೀಜಿ, ಪ್ರಯಾಗ ಮಠದ ವಿದ್ಯಾತ್ಮತೀರ್ಥ ಸ್ವಾಮೀಜಿ, ಬಾಳೆಕುದ್ರು ಮಠದ ನೃಸಿಂಹಾಶ್ರಮ ಸ್ವಾಮೀಜಿ, ಮಂಜೇಶ್ವರ ಕೊಂಡೆವೂರು ಕ್ಷೇತ್ರದ ಯೋಗಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಮಾಣಿಲದ ಮೋಹನದಾಸ ಸ್ವಾಮೀಜಿ, ಶ್ರೀಕ್ಷೇತ್ರ ಹೊಸ್ಮಾರು ವಿಖ್ಯಾತಾನಂದ ಸ್ವಾಮೀಜಿ, ಶ್ರೀ ರಾಮ ಕ್ಷೇತ್ರದ ಬ್ರಹ್ಮಾನಂದ ಸ್ವಾಮೀಜಿ, ಕಟಪಾಡಿ ಆನೆಗುಂದೆ ಮಠದ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ, ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಸುಬ್ರಹ್ಮಣ್ಯ ಮಠ, ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಪಲಿಮಾರು ಕಿರಿಯ ವಿದ್ಯಾರಾಜೇಶ್ವರ ಸ್ವಾಮೀಜಿ, ಮೂಡುಬಿದಿರೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಮಾವೇಶದಲ್ಲಿ ಇದ್ದರು.