ತೀವ್ರಗೊಂಡ ರಾಜಕೀಯ ಬೆಳವಣಿಗೆ ವಿಧಾನಸೌಧ ಸುತ್ತ ನಿಷೇಧಾಜ್ಞೆ

ಬೆಂಗಳೂರು: ‘ರಾಜಕಾರಣದ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿ ಕೆಲ ಮಾಹಿತಿಯನ್ನು ಕಲೆ ಹಾಕಲಾಗಿದೆ. ವಿಧಾನಸೌಧದ ಒಳಗೆ ಹಾಗೂ ಹೊರಗಡೆ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗುವ ಸಾಧ್ಯತೆ ಇದೆ’ ಎಂದು ಗುಪ್ತದಳದ ಅಧಿಕಾರಿಗಳು, ನಗರ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್‌ ಅವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಆ ಬಗ್ಗೆ ಪರಿಶೀಲನೆ ನಡೆಸಿದ್ದ ಅಲೋಕ್‌ಕುಮಾರ್,  ಇಂದಿನಿಂದ
ಭಾನುವಾರದವರೆಗೆ  ವಿಧಾನಸೌಧ ಸುತ್ತ 2 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
‘ವಿಧಾನಸೌಧದ ಒಳಗೆ ಹಾಗೂ ಹೊರಗೆ ರಾಜಕೀಯ ಪಕ್ಷಗಳ ಮುಖಂಡರು, ಅವರ ಅನುಯಾಯಿಗಳು ಹಾಗೂ ಕಾರ್ಯಕರ್ತರು ಸೇರಲಿದ್ದಾರೆ. ಅವರೆಲ್ಲ ಏಕಕಾಲದಲ್ಲೇ ಪ್ರತಿಭಟನೆ ಮತ್ತು ಧರಣಿ ನಡೆಸುವ ಸಾಧ್ಯತೆ ಇದೆ. ಆ ರೀತಿಯಾದರೆ ಪರಸ್ಪರ ಘರ್ಷಣೆ ಉಂಟಾಗಲಿದೆ. ವಿಧಾನಸೌಧ ಸಿಬ್ಬಂದಿಯ ಕೆಲಸಕ್ಕೆ ತೊಂದರೆಯಾಗಲಿದೆ. ಕಾನೂನು ಸುವ್ಯವಸ್ಥೆಗೂ ಧಕ್ಕೆಯಾಗಿ, ಸಂಚಾರ ವ್ಯವಸ್ಥೆ ಮೇಲೂ ಪರಿಣಾಮ ಬೀರುತ್ತದೆ. ಶಾಂತಿ ಕಾಪಾಡುವ ಉದ್ದೇಶದಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ’ ಎಂದು ಆದೇಶದಲ್ಲಿ ಅಲೋಕ್‌ಕುಮಾರ್ ಹೇಳಿದ್ದಾರೆ.
ಯಾವುದಕ್ಕೆ ನಿಷೇಧ?
ಕಾನೂನು ಭಂಗ ಉಂಟು ಮಾಡುವ ಉದ್ದೇಶದಿಂದ 5 ಅಥವಾ ಅದಕ್ಕಿಂತ ಹೆಚ್ಚು ಜನ ಗುಂಪು ಸೇರುವಂತಿಲ್ಲ
 ಮೆರವಣಿಗೆ, ಪ್ರತಿಭಟನೆ, ಧರಣಿ ಮತ್ತು ಸಭೆ ನಡೆಸುವಂತಿಲ್ಲ
ಶಸ್ತ್ರಾಸ್ತ್ರ, ದೊಣ್ಣೆ, ಕತ್ತಿ, ಈಟಿ, ಗದೆ, ಕಲ್ಲು, ಇಟ್ಟಿಗೆ, ಚಾಕು ಸೇರಿದಂತೆ ಯಾವುದೇ ಮಾರಕಾಸ್ತ್ರಗಳನ್ನು ಒಯ್ಯುವಂತಿಲ್ಲ.
 ಯಾವುದೇ ಸ್ಫೋಟಕ ವಸ್ತುಗಳನ್ನು ತರುವಂತಿಲ್ಲ, ವ್ಯಕ್ತಿಗಳ ಅಥವಾ ಶವಗಳ ಪ್ರತಿಕೃತಿಗಳ ಪ್ರದರ್ಶನ ಮಾಡುವಂತಿಲ್ಲ. ಪ್ರಚೋದನಕಾರಿಯಾದ ಬಹಿರಂಗ ಘೋಷಣೆ ಕೂಗುವಂತಿಲ್ಲ. ಸಂಜ್ಞೆ ಮಾಡುವುದು, ಹಾಡುವುದು, ಸಂಗೀತ ನುಡಿಸುವುದು, ಚಿತ್ರಗಳನ್ನು ಬಿಡಿಸುವುದನ್ನು ನಿಷೇಧಿಸಲಾಗಿದೆ

Leave a Reply

Your email address will not be published. Required fields are marked *

error: Content is protected !!