ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ: ಸೋಮವಾರ ಮುಂಜಾನೆವರೆಗೆ ಮದ್ಯ ಮಾರಾಟ ಬಂದ್
ಉಡುಪಿ: ಸರ್ವೋಚ್ಚ ನ್ಯಾಯಾಲಯವು ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿಗೆ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಕ್ಕಾಗಿ ಉಡುಪಿ ಜಿಲ್ಲಾಧಿಕಾರಿ ಅವರು ಸಿಆರ್‌ಪಿಸಿ ಕಲಂ 144 ರ ಅನ್ವಯ ಜಿಲ್ಲೆಯಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಿ ಆದೇಶ ನೀಡಿರುತ್ತಾರೆ.
ಶನಿವಾರ ಬೆಳಗ್ಗೆ 10 ಗಂಟೆಯಿಂದ ಭಾನುವಾರ ಬೆಳಗ್ಗೆ 6 ಗಂಟೆಯವರೆಗೆ ಪ್ರತಿಬಂಧಕಾಜ್ಞೆ ಹೊರಡಿಸಿರುತ್ತಾರೆ. ಮಾತ್ರವಲ್ಲದೆ ಜಿಲ್ಲೆಯಾದ್ಯಂತ ಸೋಮವಾರ ಬೆಳಿಗ್ಗೆ6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿರುತ್ತಾರೆ.
ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಅವರ ಕೋರಿಕೆಯಂತೆ ಉಡುಪಿ ಜಿಲ್ಲಾಧಿಕಾರಿ ಈ ಪ್ರತಿಬಂಧಕಾಜ್ಞೆ ಹೊರಡಿಸಿರುತ್ತಾರೆ. ಜಿಲ್ಲೆಯಲ್ಲಿ ಪ್ರತಿಬಂಧಕಾಜ್ಞೆ ಇರುವ ಸಮಯ ಯಾವುದೇ ಶಾಸ್ತ್ರಅಸ್ತ್ರ, ಕತ್ತಿ, ಈಟಿ, ಬಂದುಕೂ, ಕೋಲುಗಳನ್ನು ಸಹಿತ ಯಾವುದೇ ಮಾರಕಾಸ್ತ್ರ ಒಯ್ಯುವಂತಿಲ್ಲ.
ಅಲ್ಲದೆ ಪಟಾಕಿ, ಸಿಡಿಮದ್ದು ಸ್ಪೋಟಕಗಳನ್ನು ನಿಷೇಧಿಸಲಾಗಿದ್ದು, ಯಾವುದೇ ರೀತಿಯ ವಿಜಯೋತ್ಸವ ಮೆರವಣಿಗೆ ರಾಜಕೀಯ ಸಭೆ ನಡೆಸುವುದನ್ನು ಕೂಡ ನಿರ್ಬಂಧಿಸಲಾಗಿದೆ. ಯಾವುದೇ ಪ್ರತಿಕೃತಿ ಪ್ರದರ್ಶನ, ದಹನ ಮಾಡುವುದು ನಿಷೇಧಿಸಲಾಗಿದೆಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿರುತ್ತಾರೆ.