ಶಿಕ್ಷಕಿಗೆ ಹಲ್ಲೆ ಎಸ್‌ಡಿಎಂಸಿ ಅಧ್ಯಕ್ಷನ ವಜಾ: ಶಿಕ್ಷಣ ಸಚಿವರ ಆದೇಶ
ಬೆಂಗಳೂರು: ಉಡುಪಿ ಜಿಲ್ಲೆಯ ಉಪ್ಪುಂದ ಸರ್ಕಾರಿ ಹಿರಿಯ ಉರ್ದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರನ್ನು ವಜಾಗೊಳಿಸಿ ಕಠಿಣ ಕ್ರಮಕ್ಕೆ ಮುಂದಾಗಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶ.
ಈ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಮಮತಾ ಎಂಬುವವರ ಮೇಲೆ ಅದೇ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ಮೋಹನಚಂದ್ರ ಇವರು ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದು ಅವರನ್ನು ಎಸ್ ಡಿ ಎಂಸಿ ಹುದ್ದೆಯಿಂದ ವಜಾಗೊಳಿಸಿ ಕಠಿಣ ಕ್ರಮ ಜರುಗಿಸಲು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಈ ಕುರಿತಂತೆ ಶಿಕ್ಷಕಿಯೊಂದಿಗೇ ನೇರ ಮಾತನಾಡಿ ಸಾಂತ್ವನ ಹೇಳಿದ ಬಳಿಕ ಸಚಿವ ಸುರೇಶ್‌ಕುಮಾರ್ ಶಿಕ್ಷಣ ಇಲಾಖೆಯ ಆಯುಕ್ತರಿಗೆ, ಸಂಬಂಧಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಸ್ಪಷ್ಟ ಸೂಚನೆ ನೀಡಿದ್ದಾರೆ.
ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಸಚಿವರು ತಾವು ಸ್ಥಳೀಯ ಶಾಸಕರಿಗೂ ಈ ಬಗ್ಗೆ ತಿಳಿಸಿದ್ದು, ಇಂತಹ ಪ್ರಕರಣಗಳಲ್ಲಿ zero tolerance ಇರಬೇಕೆಂದು ಅಭಿಪ್ರಾಯಿಸಿದ್ದಾರೆ.