ವಿದೇಶದಿಂದ ಬರುವವರಿಗೆ ಹೆಜಮಾಡಿ ಕಾಲೇಜಿನಲ್ಲಿ ಸ್ಕ್ರೀನಿಂಗ್: 150 ಮಂದಿ ಕ್ವಾರಂಟೈನ್
ಪಡುಬಿದ್ರಿ: ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೊಳಗಾಗಿ ವಿದೇಶದಿಂದ ಬರುವವರನ್ನು ಹೆಜಮಾಡಿ ಸರ್ಕಾರಿ ಕಾಲೇಜಿನಲ್ಲಿ ಸ್ಕ್ರೀನಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಬುಧವಾರ ರಾತ್ರಿ ಉಡುಪಿ ಜಿಲ್ಲೆಯ ಗಡಿ ಪ್ರದೇಶ ಹೆಜಮಾಡಿ ತಪಾಸಣಾ ಕೇಂದ್ರಕ್ಕೆ ಹೆಜಮಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆರಂಭಿಸಲಿರುವ ತಪಾಸಣಾ ಕೇಂದ್ರದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಬುಧವಾರ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಜಿ.ಜಗದೀಶ್, ಹೊರದೇಶದಿಂದ 201 ಮಂದಿ ಬರಲಿದ್ದಾರೆ. ಅವರಿಗೆ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ನಡೆಸಲಾಗುವುದು. ಜಿಲ್ಲೆ ಪ್ರವೇಶಿಸುವ ಗಡಿಭಾಗದಲ್ಲಿ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ತಪಾಸಣೆ ಬಳಿಕ ಅವರನ್ನು ಕ್ವಾರೆಂಟೈನ್‌ನಲ್ಲಿ ಇಡಲಾಗುತ್ತದೆ. ಹಾಸ್ಟೆಲ್‌ನಲ್ಲಿ ಕ್ವಾರೆಂಟೈನ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಅದರಲ್ಲಿ ವಾಸ ಮಾಡುವುದಕ್ಕೆ ಮನಸ್ಸು ಮಾಡುವವರು ತಮ್ಮ ಸ್ವಂತ ಖರ್ಚಿನಲ್ಲಿ ಖಾಸಗಿ ಹೋಟೆಲ್‌ಗಳಲ್ಲೂ ವಾಸ್ತವ್ಯ ಮಾಡಬಹುದು ಎಂದು ಅವರು ತಿಳಿಸಿದರು. ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್, ಕಾಪು ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್, ಕಂದಾಯ ಅಧಿಕಾರಿಗಳಾದ ಅರುಣ್ ಕುಮಾರ್, ವಿಜಯ್ ಇದ್ದರು. ಬುಧವಾರ ರಾತ್ರಿಯಿಂದ ಗುರುವಾರ ಸಂಜೆಯವರೆಗೆ ಉಡುಪಿ ಜಿಲ್ಲೆ ಪ್ರವೇಶಿಸಿದ ತಮಿಳುನಾಡಿನ 2, ಅನ್ಯ ಜಿಲ್ಲೆಗಳ 60 ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಿದ ಅನ್ಯ ಜಿಲ್ಲೆಗಳ 90 ಮಂದಿಗೆ ಮುದ್ರೆ ಹಾಕಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಲಾಕ್‌ಡೌನ್ ಸಡಿಲಿಕೆಯಿಂದ ಕಳೆದೆರಡು ದಿನಗಳಿಂದ ಅವಿಭಜಿತ ಜಿಲ್ಲೆಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚಿದ್ದು, ಹೆಜಮಾಡಿ ತಪಾಸಣಾ ಕೇಂದ್ರದಲ್ಲಿ ಒತ್ತಡ ಹೆಚ್ಚಾಗಿದೆ. |