ಶಾಲಾ ವಾಹನ ಚಾಲಕರ ಪ್ರತಿಭಟನೆ

ಬಂಟ್ವಾಳ : ವಾಹನ ತಪಾಸಣೆ ಮಾಡಿ ದಂಡ ವಿಧಿಸುವ ಮೂಲಕ ಸಮಸ್ಯೆ ಉಂಟಾಗುತ್ತಿರುವ ಹಿನ್ನಲೆಯಲ್ಲಿ, ನಿಯಮಗಳನ್ನು ಸಡಿಲಿಗೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾವಾಹನ ಸಾಗಾಟ ಮಾಲೀಕ, ಚಾಲಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಬಂಟ್ವಾಳ ಎಎಸ್ಪಿ ಸೈದುಲು ಅದಾವತ್ ಅವರನ್ನು ಭೇಟಿ ಮಾಡಿದ ಸಂಘದ ಸದಸ್ಯರು, ಈ ಕುರಿತು ಮನವಿ ಮಾಡಿ ಆಡಳಿತದ ಗಮನ ಸೆಳೆದರು. ಶುಕ್ರವಾರವೂ ಶಾಲಾ ಮಕ್ಕಳ ವಾಹನಗಳ ಸಾಗಾಟ ಇರುವುದಿಲ್ಲ ಎಂದು ಸಂಘದ ತಾಲೂಕು ಅಧ್ಯಕ್ಷ ಸದಾನಂದ ನಾವೂರ ತಿಳಿಸಿದ್ದಾರೆ.

ಬೆಳಗ್ಗೆ ಮಿನಿ ವಿಧಾನಸೌಧದ ಮುಂಭಾಗ ಸಭೆ ಸೇರಿದ ಚಾಲಕರು, ಬಳಿಕ ಅಲ್ಲಿಂದ ಎಎಸ್ಪಿ ಸೈದುಲು ಅದಾವತ್ ಅವರ ಕಚೇರಿಗೆ ತೆರಳಿದರು. ನಿಯಮಗಳನ್ನು ಸಡಿಲಿಸಿದರೆ ಬಡ ಚಾಲಕ ವರ್ಗಕ್ಕೆ ಬದುಕಲು ಸಹಾಯವಾಗುತ್ತದೆ. ಅಲ್ಲದೆ ಪೋಷಕ ವರ್ಗದ ಆರ್ಥಿಕ ಹೊರೆಯೂ ಕಡಿಮೆಯಾಗುತ್ತದೆ ಎಂದು ಸಂಘದ ಅಧ್ಯಕ್ಷ ಸದಾನಂದ ನಾವರ ಹೇಳಿದರು.

ದ.ಕ.ಜಿಲ್ಲಾ ಟೂರಿಸ್ಟ್ ಕಾರು ಮತ್ತು ವ್ಯಾನು ಚಾಲಕ- ಮಾಲಕರ ಸಂಘ ಬಂಟ್ವಾಳ ಅಧ್ಯಕ್ಷ ಬಿ.ಎಂ. ಪ್ರಭಾಕರ ದೈವಗುಡ್ಡೆ, ಬಸ್ ಗಳಲ್ಲಿ ಮಿತಿಮೀರಿ ಪ್ರಯಾಣಿಕರನ್ನು ಹೇರಿಕೊಂಡು ಸಂಚರಿಸುವುದನ್ನು ಗಮನಿಸದೆ ಕೇವಲ ಶಾಲಾ ವಾಹನಗಳನ್ನು ತಪಾಸಣೆ ಮಾಡಲಾಗುತ್ತದೆ. ಕೆಲವು ವಾಹನಗಳ ಮೇಲೆ ಎರಡೆರಡು ಬಾರಿ ದಂಡ ವಿಧಿಸಿ, ಚಾಲಕರ ಲೈಸನ್ಸ್ ಮುಟ್ಟುಗೋಲು ಹಾಕಿದ್ದುಂಟು, ಇಂಥ ಸನ್ನಿವೇಶದಲ್ಲಿ ನಾವು ಕೆಲಸ ಮಾಡಲು ಸಮಸ್ಯೆ ಉಂಟಾಗುತ್ತದೆ ಎಂದು ಎಎಸ್ಪಿ ಅವರಲ್ಲಿ ಮನವಿ ಮಾಡಿದರು.

ಈ ಸಂದರ್ಭ ಉತ್ತರಿಸಿದ ಎಎಸ್ಪಿ ಸೈದುಲು ಅದಾವತ್, ನಾವು ಸರಕಾರದ ನಿಯಮಗಳನ್ನು ಪಾಲಿಸುತ್ತೇವೆ. ಶಾಲಾ ವಾಹನ ಸಾಗಾಟ ಚಾಲಕರಿಗೆ ತೊಂದರೆ ಮಾಡುವ ಇರಾದೆ ನಮಗಿಲ್ಲ. ನೀವು ಸಂಚಾರಿ ನಿಯಮಗಳನ್ನು ಪಾಲಿಸಿದರೆ ಯಾವುದೇ ಸಮಸ್ಯೆ ಇಲ್ಲ. ನಿಮ್ಮ ಧ್ವನಿಯನ್ನು ಮೇಲಧಿಕಾರಿಗಳಿಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭ ದ.ಕ.ಜಿಲ್ಲಾ ಶಾಲಾ ವಾಹನ ಚಾಲಕರ ಸಂಘದ ಉಪಾಧ್ಯಕ್ಷ ಜಯರಾಮ ಆಚಾರ್ಯ, ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ವಸಂತ ಚಂಡ್ತಿಮಾರ್, ಪ್ರಮುಖರಾದ ರಾಜಾ ಚಂಡ್ತಿಮಾರ್, ಇಕ್ಬಾಲ್, ಸೀತಾರಾಮ, ಕಿರಣ್ ಪಿಂಟೋ, ಮ್ಯಾಕ್ಸಿಂ ಸಹಿತ ಹಲವು ವಾಹನ ಚಾಲಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!