ಸಾವರ್ಕರ್ ಕ್ರಾಂತಿಕಾರಿಯಲ್ಲ, ಬ್ರಿಟಿಷರಿಗೆ ಶರಣಾಗಿದ್ದರು: ಡಾ. ಕೆ. ಪ್ರಕಾಶ್
ಉಡುಪಿ: ಸಾವರ್ಕರ್ ಕ್ರಾಂತಿಕಾರಿಯಲ್ಲ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಕಮ್ಯುನಿಸ್ಟ್ ನಾಯಕರು ಸೇರಿದಂತೆ ಸಾವಿರಾರು ಮಂದಿ ಅಂಡಮಾನ್ ನಿಕೋಬಾರ್ ಜೈಲಿನಲ್ಲಿದ್ದರು. ಯಾರೂ ಬಿಡುಗಡೆಯ ಆಸೆಗಾಗಿ ಕ್ಷಮಾಪಣೆ ಕೇಳಲಿಲ್ಲ. ಆದರೆ, ಸಾವರ್ಕರ್ ಮಾತ್ರ ಕ್ಷಮಾಪಣೆ ಕೇಳಿ ಆರು ಬಾರಿ ಬ್ರಿಟಿಷರಿಗೆ ಪತ್ರ ಬರೆದಿದ್ದರು. ಜೈಲಿಗೆ ಹೋಗುವ ಮೊದಲು ವೀರನಾಗಿದ್ದ ಸಾವರ್ಕರ್, ಅಲ್ಲಿ ಬ್ರಿಟಿಷರಿಗೆ ಶರಣಾಗಿದ್ದರು ಎಂದು ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ ಉಪಾಧ್ಯಕ್ಷ ಡಾ. ಕೆ. ಪ್ರಕಾಶ್ ಗಂಭೀರ ಆರೋಪ ಮಾಡಿದರು.
ಬನ್ನಂಜೆ ನಾರಾಯಣಗುರು ಸಭಾಭವನದಲ್ಲಿ ಭಾನುವಾರ ನಡೆದ ಸಿಐಟಿಯು ಸುವರ್ಣ ಮಹೋತ್ಸವ ಹಾಗೂ ಕಾರ್ಮಿಕ ಚಳುವಳಿಯ 100ನೇ ವರ್ಷಾಚರಣೆಯ ಸಂಭ್ರಮದಲ್ಲಿ ಅವರು ಮಾತನಾಡಿ ಬ್ರಿಟಿಷರ ವಿರುದ್ಧ ಹೋರಾಡಿ ತ್ಯಾಗ ಬಲಿದಾನದ ಮೂಲಕ ಪಡೆದುಕೊಂಡ ಪ್ರತಿಯೊಂದು ಕಾರ್ಮಿಕ ಹಕ್ಕುಗಳನ್ನೂ ಇಂದು ನಾಶ ಮಾಡಲಾಗುತ್ತಿದೆ. ಮೋದಿ ಸರ್ಕಾರವು 44 ಕಾರ್ಮಿಕ ಕಾನೂನುಗಳನ್ನು ಕಿತ್ತು, 4 ಕಾರ್ಮಿಕ ಕಾಯ್ದೆಗಳನ್ನು ಜಾರಿ ಮಾಡಲು ಹೊರಟಿದೆ ಎಂದರು.
ಇಂದಿನ ಆಡಳಿತರೂಢ ಕೇಂದ್ರ ಸರ್ಕಾರವು ಕಾರ್ಮಿಕರನ್ನು ಬ್ರಿಟಿಷರಿಗಿಂತಲೂ ನೀಚವಾಗಿ ನಡೆಸಿಕೊಳ್ಳುತ್ತಿದೆ. ಬ್ರಿಟಿಷರು ಯಾವ ಕಾನೂನುಗಳನ್ನು ಬಳಸಿಕೊಂಡು ಕಾರ್ಮಿಕರ ಹಕ್ಕುಗಳನ್ನು ದಮನ ಮಾಡಿದ್ದರೋ, ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಕಾರ್ಮಿಕರ ಹಕ್ಕುಗಳನ್ನು ನಾಶ ಮಾಡುವ ಕೆಲಸಕ್ಕೆ ಈ ಸರ್ಕಾರ ಕೈಹಾಕಿದೆ ಎಂದು ಆರೋಪಿಸಿದರು.
ಈಗಾಗಲೇ ಅದರಲ್ಲಿ ಒಂದು ಮಸೂದೆ ಅಂಗೀಕರಿಸಲ್ಪಟ್ಟಿದ್ದು, ಇನ್ನೊಂದು ಮಸೂದೆ ಮುಂಬರುವ ಸಂಸತ್ ಅಧಿವೇಶನದಲ್ಲಿ ಅಂಗೀಕಾರ ಪಡೆಯುವ ಸಾಧ್ಯತೆ ಇದೆ. ಹಾಗೆಯೇ ಮುಂದಿನ ದಿನದಲ್ಲಿ ನಾಲ್ಕು ಮಸೂದೆಗಳು ಅಂಗೀಕಾರ ಆಗಲಿವೆ. ಇವು ಜಾರಿಗೊಂಡರೆ ಕಾರ್ಮಿಕ ಸಂಘಟನೆಗಳನ್ನು ಕಟ್ಟಲು ಸಾಧ್ಯವಿಲ್ಲ. ಕಾರ್ಮಿಕ ಹಕ್ಕುಗಳು ಸಹ ನಿರ್ನಾಮ ಆಗುತ್ತದೆ. ಕೈಗಾರಿಕಾ ವಿವಾದ ಕಾಯ್ದೆಯ ಎಲ್ಲ ಅಂಶಗಳನ್ನು ಮೋದಿ ಸರ್ಕಾರ ನಾಶ ಮಾಡಲು ಹೊರಟಿದೆ. ಹಾಗಾಗಿ ಕಾರ್ಮಿಕ ಹಕ್ಕುಗಳು ಹೇಗೆ ಉಳಿಯಲು ಸಾಧ್ಯ ಎಂದು ಪ್ರಶ್ನಿಸಿದರು.
ಹೋರಾಟದ ಫಲವಾಗಿ ಕಾರ್ಮಿಕರು ಪಡೆದುಕೊಂಡಿದ್ದ ಕನಿಷ್ಠ ವೇತನ, ಬೋನಸ್, ಇಎಸ್‌ಐ, ಪಿಂಚಣಿ ಸೌಲಭ್ಯಗಳನ್ನು ಸರ್ಕಾರ ಕಿತ್ತುಕೊಂಡಿದೆ. ಇಂದಿನ ಕೇಂದ್ರ ಸರ್ಕಾರವು ದಿನಕ್ಕೆ ₹ 178ರಂತೆ ತಿಂಗಳಿಗೆ ಸುಮಾರು ₹ 4,600 ಕನಿಷ್ಠ ವೇತನ ನಿಗದಿ ಮಾಡಿದೆ. ಇದನ್ನು ಒಪ್ಪಿಕೊಳ್ಳುವಂತೆ ದೇಶಪ್ರೇಮದ ಹೆಸರಿನಲ್ಲಿ ಬೆದರಿಕೆ ಹಾಕಲಾಗುತ್ತಿದೆ ಎಂದು ದೂರಿದರು.
ಸಿಐಟಿಯು ಉಡುಪಿ ತಾಲ್ಲೂಕು ಸಮಿತಿ ಉಪಾಧ್ಯಕ್ಷ ಶೇಖರ್ ಬಂಗೇರ, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ, ವಿಮಾ ನೌಕರರ ಸಂಘದ ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಿ. ಕುಂದರ್, ಬ್ಯಾಂಕ್ ನೌಕರರ ಒಕ್ಕೂಟದ ಉಪಾಧ್ಯಕ್ಷ ಬಿ.ಎಂ. ಮಾಧವ, ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ, ಆಚರಣಾ
ಸಮಿತಿ ಅಧ್ಯಕ್ಷ ಪಿ. ವಿಶ್ವನಾಥ ರೈ, ಕಾರ್ಯದರ್ಶಿ ಎಸ್. ಕವಿರಾಜ್, ಸುಂದರಿ, ಕಮಲಾ, ಭಾರತಿ ಇದ್ದರು. ಸಮಿತಿಯ ಕೋಶಾಧಿಕಾರಿ ಶಶಿಧರ್ ಗೊಲ್ಲ ಸ್ವಾಗತಿಸಿದರು.