ಕೋಟ : ಅಕ್ರಮ ದನ ಸಾಗಾಟಕ್ಕೆ ಸಹಕಾರ ನೀಡಿದ ಪೊಲೀಸ್ ಆತ್ಮಹತ್ಯೆಗೆ ಯತ್ನ
ಉಡುಪಿ: ಅಕ್ರಮ ದನ ಸಾಗಾಟಗಾರರಿಗೆ ಸಹಕಾರ ನೀಡಿದ ಆರೋಪದಲ್ಲಿ ಬಂಧಿಸಲ್ಪಟ್ಟ ಕರಾವಳಿ ಕಾವಲು ಪಡೆಯ ಹೆಡ್ ಕಾನ್ಸ್ಟೆಬಲ್ ಸಂತೋಷ್ ಶೆಟ್ಟಿ (37) ಆತ್ಮಹತ್ಯೆಗೆ ಯತ್ನ.
ಜುಲೈ 12ರಂದು ಕೋಟಾ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ದನ ಸಾಗಾಟದ ಮಾಹಿತಿ ಪಡೆದ ಕೋಟ ಠಾಣಾಧಿಕಾರಿ ನಿತ್ಯಾನಂದ ಗೌಡ ಅಕ್ರಮವಾಗಿ ಗೋವುಗಳನ್ನು ಕಾಸರಗೋಡಿಗೆ ಸಾಗಿಸುತ್ತಿದ್ದ ಲಾರಿ ಮತ್ತು ಅದಕ್ಕೆ ಬೆಂಗಾವಲಾಗಿ ರಕ್ಷಣೆ ನೀಡುತ್ತಿದ್ದ ಕಾರನ್ನು ವಶ ಪಡಿಸಿಕೊಂಡಿದ್ದರು .ಇದರಲ್ಲಿ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದರು.
ಈ ಬಂಧಿತರು ನೀಡಿದ ಮಾಹಿತಿಯಂತೆ ದನ ಸಾಗಾಟಕ್ಕೆ ಹಣಪಡೆದು ಉಡುಪಿ ಜಿಲ್ಲೆಯ ನಾಲ್ಕು ಮಂದಿ ಪೊಲೀಸರು ಸಹಕಾರ ನೀಡುತ್ತಿದ್ದಾರೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿತ್ತು. ಸಾಗಾಟಕ್ಕೆ ಪೊಲೀಸರ ಸಹಕಾರ ನೀಡುತ್ತಿದ್ದಾರೆ ಎಂಬ ಮಾಹಿತಿ ಪಡೆದ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದರು . ತಕ್ಷಣ ಕೋಟ ಠಾಣಾಧಿಕಾರಿ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಬಂಧಿಸಿದ್ದರು.
ಇದರಲ್ಲಿ ಕರಾವಳಿ ಕಾವಲು ಪಡೆಯ ಹೆಡ್ ಕಾನ್ಸ್ಟೆಬಲ್ ಸಂತೋಷ್ ಶೆಟ್ಟಿಯು ಬಂಧನಕ್ಕೊಳಗಾಗಿದ್ದ. ನಿನ್ನೆ ನ್ಯಾಯಾಲಯ ಸಂತೋಷ್ ಶೆಟ್ಟಿಗೆ ಈ ಪ್ರಕರಣದಲ್ಲಿ ಜಾಮೀನು ನೀಡಿ ನೀಡಿತ್ತು. ಅಕ್ರಮ ದನ ಸಾಗಾಟಕ್ಕೆ ಹಣ ಪಡೆದು ಸಹಕಾರ ನೀಡುತ್ತಿದ್ದ ಸಂತೋಷ್ ಶೆಟ್ಟಿ ಇಂದು ಮಧ್ಯಾಹ್ನ 1:40 ಸುಮಾರಿಗೆ ಆದಿವುಡುಪಿಯ ತನ್ನ ಮನೆಯ ಬಳಿ ಕಾರು ನಿಲ್ಲಿಸಿ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದ.
ಸಂತೋಷ್ ಹೊರಗೆ ಕಾರಿನಲ್ಲಿ ಮಲಗಿರುವುದು ಕಂಡು ಆತನ ಪತ್ನಿ ಹೋದಾಗ ನಿದ್ದೆ ಮಾತ್ರೆ ತಿಂದಿರುವುದು ತಿಳಿದು, ಸ್ಥಳೀಯರ ಸಹಕಾರದಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಪ್ರಾಣಾಪಾಯದಿಂದ ಸಂತೋಷ ಪಾರಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆತ್ಮಹತ್ಯೆಗೆ ಮೊದಲು ಸಂತೋಷ್ ಉಡುಪಿ ಎಸ್ಪಿಗೆ ವಾಟ್ಸಾಪ್ ಮೆಸೇಜ್ ಕಳುಹಿಸಿದ್ದಾನೆ ಎಂದು ತಿಳಿದುಬಂದಿದೆ.