ಸಂಘಟನ್ ಪರ್ವ, ಸದಸ್ಯತ್ವ ಅಭಿಯಾನ, ಗೆಲುವಿನ ಅಹಂ ಬೇಡ : ಸಿ. ಟಿ. ರವಿ ಕಿವಿಮಾತು
ಮಡಿಕೇರಿ: ನಿರಂತರ ಗೆಲುವಿನ ಅಹಂನಿಂದ ಮೈಮರೆಯದೆ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮತ್ತಷ್ಟು ಪ್ರಬಲವಾಗಿ ಸಂಘಟಿಸುವಂತೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ. ಟಿ. ರವಿ ಬಿಜೆಪಿ ಮುಖಂಡರಿಗೆ ಕಿವಿಮಾತು ಹೇಳಿದ್ದಾರೆ.
ಭಾರತೀಯ ಜನತಾ ಪಾರ್ಟಿಯನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಜು. 6 ರಿಂದ ಆ. 11 ರವರೆಗೆ ದೇಶಾದ್ಯಂತ ಸಾಥ್ ಆಯೇ-ದೇಶ್ ಬನಾಯೇ ಎಂಬ ಘೋಷ ವಾಕ್ಯದೊಂದಿಗೆ ಸಂಘಟನ್ ಪರ್ವ ಸದಸ್ಯತ್ವ ಅಭಿಯಾನ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಇಂದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗಾಗಿ ಕಾರ್ಯಾಗಾರ ನಡೆಯಿತು.
ನಗರದ ಜಿಲ್ಲಾ ಶಿಶುಕಲ್ಯಾಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಸಿ.ಟಿ.ರವಿ, ಕೊಡಗಿನಲ್ಲಿ ಮುಂದಿನ ದಿನಗಳಲ್ಲಿ 25 ಸಾವಿರ ನೂತನ ಸದಸ್ಯರನ್ನು ಬಿಜೆಪಿಗೆ ಸೇರ್ಪಡೆಗೊಳಿಸಬೇಕು. ಕಳೆದ ಬಾರಿ ಜಿಲ್ಲೆಯಲ್ಲಿ 48 ಸಾವಿರ ನೂತನ ಸದಸ್ಯರನ್ನು ಸೇರ್ಪಡೆಗೊಳಿಸಿರುವುದು ಶ್ಲಾಘನೀಯ ಎಂದರು.
ಕೇಂದ್ರ ಸರ್ಕಾರ ಈವರೆಗೂ ಯೋಜನೆಗಳನ್ನು ಜಾರಿಗೊಳಿಸುವಾಗ ಯಾವುದೇ ಜಾತಿ, ಧರ್ಮದ ತಾರತಮ್ಯ ಮಾಡಿಲ್ಲ ಎಂಬ ಅಂಶವನ್ನು ಮನವರಿಕೆ ಮಾಡಿ. ವ್ಯಕ್ತಿಗಾಗಿ ಅಲ್ಲದೆ ದೇಶಕ್ಕಾಗಿ ಕಾರ್ಯನಿರ್ವಹಿಸುವ ಬಿಜೆಪಿ ಮುಖಂಡರ ಕಾರ್ಯವೈಖರಿಯನ್ನು ಮನದಟ್ಟು ಮಾಡಿಕೊಡಿ ಎಂದು ಕರೆ ನೀಡಿದರು.
ದೇಶಪ್ರೇಮಿಗಳ ಪರವಾಗಿ ಬಿಜೆಪಿ ಇದೆಯೇ ಹೊರತು ದೇಶವಿರೋಧಿಗಳ ಪರ ಎಂದೂ ಇಲ್ಲ. ಹೀಗಾಗಿ ದೇಶವನ್ನು ಪ್ರೀತಿಸುವವರು ಯಾವ ವರ್ಗದವರೇ ಆಗಿರಲಿ ಅಂಥವರಿಗೆ ಪಕ್ಷಕ್ಕೆ ಸ್ವಾಗತವಿದೆ, ಸಮಾನ ನಾಗರಿಕ ಸಂಹಿತೆಯಂಥ ಕಾನೂನು ಜಾರಿಯಿಂದ ದೇಶದಲ್ಲಿ ಎಲ್ಲರಿಗೂ ಸಮಾನ ನ್ಯಾಯ ದೊರಕಿದಂತಾಗುತ್ತದೆಯೇ ಹೊರತು ಈ ಕಾನೂನು ಯಾರಿಗೂ ಅನ್ಯಾಯ ಮಾಡುವುದಿಲ್ಲವೆಂದು ಅಭಿಪ್ರಾಯಪಟ್ಟರು.
ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಗ್ರಾಮವಾಸ್ತವ್ಯದ ಹೆಸರಲ್ಲಿ ಮುಖ್ಯಮಂತ್ರಿಗಳು ರಾಜಕೀಯ ದ್ವೇಷ ತೀರಿಸಿಕೊಳ್ಳುತ್ತಿದ್ದಾರೆ. ಚುನಾವಣಾ ಸೋಲಿನ ಹತಾಶೆಯಿಂದ ಬೇಕಾಬಿಟ್ಟಿ ಹೇಳಿಕೆಯನ್ನು ಕುಮಾರಸ್ವಾಮಿ ನೀಡುತ್ತಿದ್ದಾರೆ ಎಂದು ದೂರಿದರು.
ವಿಧಾನಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಹ್ಮಣಿ ಮಾತನಾಡಿ, ವಾರಣಾಸಿಯಲ್ಲಿ ಜಾರಿಗೊಳಿಸಿದಂತೆ ವೈನಾಡ್ ನಲ್ಲಿಯೂ ಸಾಕಷ್ಟು ಯೋಜನೆ ಜಾರಿಗೊಳಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಕೇರಳದಲ್ಲಿ ಬಿಜೆಪಿಗೆ 1 ಸ್ಥಾನ ಬಾರದೇ ಇದ್ದರೂ ಕ್ಷೇತ್ರದ ಪ್ರಗತಿ ಮುಖ್ಯ ಎಂಬ ಮೋದಿ ಧೋರಣೆಯೆಲ್ಲಿ, ಮೋದಿಗೆ ವೋಟ್ ಹಾಕ್ತೀರಾ ಎಂದು ಬೊಬ್ಬಿಡುತ್ತಿರುವ ಮೈತ್ರಿ ಪಕ್ಷಗಳ ಮುಖಂಡರ ಮನಸ್ಥಿತಿಯೆಲ್ಲಿ ಎಂದು ಪ್ರಶ್ನಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್, ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮನುಮುತ್ತಪ್ಪ, ರಾಜ್ಯ ಕಾರ್ಯದರ್ಶಿ ರಾಬಿನ್ ದೇವಯ್ಯ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಕಾರ್ಯಾಗಾರದಲ್ಲಿ ಹಾಜರಿದ್ದರು.