ಉಡುಪಿಯಲ್ಲಿ ಇನ್ನು ಆನ್‌ಲೈನ್ ಮೂಲಕ ಮರಳು ಮಾರಾಟ


ಉಡುಪಿ: ಮರಳು ಮಾರಾಟದಲ್ಲಿ ಯಾವುದೇ ಅಕ್ರಮಗಳಿಗೆ ಆಸ್ಪದವಿಲ್ಲದಂತೆ ಬಡವರಿಗೂ ಕೈಗೆಟುಕುವ ದರದಲ್ಲಿ ಮರಳು ಲಭ್ಯವಾಗುವಂತೆ ಉಡುಪಿ ಇ-ಸ್ಯಾಂಡ್ ವೆಬ್‌ಸೈಟ್ ಮತ್ತು ಆಪ್ ಮೂಲಕ ಮರಳನ್ನು ಗ್ರಾಹಕರಿಗೆ ವಿತರಿಸುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಜಿ.ಜಗದೀಶ್ ಚಾಲನೆ ನೀಡಿದರು.


ಸೋಮವಾರ ಹಿರಿಯಡ್ಕ ಮರಳು ಸಂಗ್ರಹಾರದಲ್ಲಿ ಆನ್‌ಲೈನ್ ಪ್ರಕಿಯೆಯ ಮೂಲಕ ನೊಂದಾಯಿಸಲ್ಪಟ್ಟ ಲಾರಿ ಮಾಲೀಕರಿಗೆ ಟ್ರಿಪ್ ಷೀಟ್ ನೀಡುವ ಮೂಲಕ ಮರಳು ಸಾಗಾಟಕ್ಕೆ ವಿಧಿವತ್ತಾಗಿ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಜಿ. ಜಗದೀಶ್, , www.udupiesand.com ಮೂಲಕ ಗ್ರಾಹಕರು ಮುಂಗಡವಾಗಿ ಮರಳನ್ನು ಕಾದಿರಿಸಬಹುದು. ಈ ವೆಬ್‌ಸೈಟ್‌ನಲ್ಲಿ ತಮ್ಮ ವಿವರ, ವಿಳಾಸ ಮತ್ತು ಬೇಕಾಗಿರುವ ಮರಳಿನ ವಿವರವನ್ನು ದಾಖಲಿಸಿ, ಅಂದಾಜು ವೆಚ್ಚವನ್ನು ಪರಿಶೀಲಿಸಿ ಹಣ ಪಾವತಿಸಿ ಬುಕಿಂಗ್ ಐಡಿ ಮತ್ತು ಒಟಿಪಿಯನ್ನು ಪಡೆದುಕೊಳ್ಳಬಹುದು.

ಪ್ರಸ್ತುತ ಒಂದು ಮೆಟ್ರಿಕ್ ಟನ್‌ಗೆ ೫೫೦ ರೂ. ನಿಗದಿಯಾಗಿದ್ದು, ಆರ್.ಟಿ.ಓ ನಿಯಮಾವಳಿ ಪ್ರಕಾರ ಒಂದು ಲೋಡ್‌ನಲ್ಲಿ ಗರಿಷ್ಠ ಹತ್ತು ಮೆಟ್ರಿಕ್ ಟನ್ ಮರಳನ್ನು ಪಡೆಯುವ ಅವಕಾಶವಿದೆ. ಆಪ್ ಲಾರಿ ಮಾಲಿಕರ ಬಳಿಯೂ Udupi e-sand ಆಪ್ ಇರಲಿದ್ದು, ಇದರಲ್ಲಿ ವಿತರಣೆ ಮಾಡಬೇಕಾಗಿರುವ ಗ್ರಾಹಕರ ವಿವರ ಮತ್ತು ವಿಳಾಸ ನಮೂದಾಗುತ್ತದೆ. ಗ್ರಾಹಕರ ಮನೆ ಬಾಗಿಲಿಗೆ ಮರಳು ವಿತರಣೆ ನಡೆಯುವ ಸಂದರ್ಭದಲ್ಲಿ ಗ್ರಾಹಕರು ತಮ್ಮ ಒಟಿಪಿಯನ್ನು ಮರಳು ಸಾಗಟದ ಲಾರಿ ಚಾಲಕರಿಗೆ ತೋರಿಸಿ ಮರಳನ್ನು ಪಡೆದುಕೊಳ್ಳಬಹುದು.

ಸಿ.ಆರ್.ಜೆಡ್ ವ್ಯಾಪ್ತಿಯ ಮರಳನ್ನು ವಿಲೇವಾರಿ ಮಾಡಲು ಅನುಮತಿ ಸಿಕ್ಕಿರುವುದರಿಂದ ಮುಂದಿನ ದಿನಗಳಲ್ಲಿ ಮರಳು ಪೂರೈಕೆಯಲ್ಲಿ ಕೊರತೆಯಾಗುವುದಿಲ್ಲ. ಜಿಲ್ಲೆಯಲ್ಲಿ ಈಗಾಗಲೇ 150 ಲಾರಿಗಳು ಆಪ್‌ನಲ್ಲಿ ನೋಂದಾಯಿಸಲ್ಪಟ್ಟಿವೆ, ಜಿಲ್ಲೆಯ ಜನರು ಈ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.


ಇದೇ ಸಂಧರ್ಭದಲ್ಲಿ ಸ್ವರ್ಣಾ ಬಜೆ ಅಣೆಕಟ್ಟಿನಿಂದ ಹೂಳು ತೆಗೆಯುವಿಕೆ ಮತ್ತು ಮರಳು ದಾಸ್ತಾನಿನ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ, ಎರಡನೇ ಹಂತದ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಸಹ, ಹೂಳೆತ್ತುವಿಕೆ ಆರಂಭವಾಗದ ಕುರಿತು ಡಿಸಿ ಆಕ್ಷೇಪ ವ್ಯಕ್ತಪಡಿಸಿ, ಡಿಸೆಂಬರ್ 31 ರೊಳಗೆ ದಾಸ್ತಾನು ಕೇಂದ್ರದಲ್ಲಿರುವ ಎಲ್ಲಾ ಮರಳನ್ನು ವಿಲೇವಾರಿ ಮಾಡುವಂತೆ ಹಾಗೂ ಟೆಂಡರ್ ವಹಿಸಿಕೊಂಡವರು ಪ್ರತಿನಿತ್ಯ ಕನಿಷ್ಠ 50-60 ಲೋಡ್ ಮರಳನ್ನು ದಾಸ್ತಾನು ಕೇಂದ್ರಕ್ಕೆ ತಂದು ಶೇಖರಿಸುವಂತೆ ಮತ್ತು ವೆಂಟೆಡ್ ಡ್ಯಾಮ್ ಪ್ರದೇಶದ ಮರಳನ್ನು ಹಂತ ಹಂತವಾಗಿ ತೆಗೆದು ಗ್ರಾಹಕರ ಅಗತ್ಯಗಳನ್ನು ಯಾವುದೇ ಅಡ್ಡಿಯಿಲ್ಲದಂತೆ ಪೂರೈಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.


ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ರಾಂಜಿ ನಾಯ್ಕ್ ಮಾಹಿತಿ ನೀಡುತ್ತಾ, ಸಿಆರ್‌ಝಡ್ ವ್ಯಾಪ್ತಿಯ ಸ್ವರ್ಣಾ, ಸೀತಾನದಿ, ಪಾಪನಾಶಿನಿ ನದಿಗಳಲ್ಲಿ ಹೆಚ್ಚುವರಿ ಸ್ಯಾಂಡ್ ಬಾರ್‌ಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ನಾನ್ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ ೩೦ ಬ್ಲಾಕ್‌ಗಳಲ್ಲಿ 7 ಬ್ಲಾಕ್‌ಗಳು ಸರಕಾರಿ ಕಾಮಗಾರಿಗಳಿಗೆ ಮತ್ತು 23 ಬ್ಲಾಕ್‌ಗಳಲ್ಲಿ 2 ಈಗಾಗಲೇ ಟೆಂಡರ್ ಅಗಿದೆ, 21 ಕ್ಕೆ ಮರು ಟೆಂಡರ್ ಕರೆಯಬೇಕಿದೆ ಎಂದರು.


ದಾಸ್ತಾನು ಕೇಂದ್ರದಲ್ಲಿ ತಂತಿಬೇಲಿ ಮತ್ತು 5 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ನಾಲ್ಕು ಕಡೆ ಚೆಕ್‌ಪೋಸ್ಟ್‌ಗಳನ್ನು ಮಾಡಿದ್ದು, ಅಲ್ಲಿಯೂ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ನಿತ್ಯವೂ ಕೇಂದ್ರದಲ್ಲಿ ಎಷ್ಟು ಮರಳು ಸಂಗ್ರಹಣೆಯಾಗುತ್ತಿದೆ ಮತ್ತು ಎಷ್ಟು ಪ್ರಮಾಣದ ಮರಳು ವಿತರಣೆಯಾಗುತ್ತಿದೆ ಎನ್ನುವ ಮಾಹಿತಿಯನ್ನು ಕೇಂದ್ರದಲ್ಲಿರುವ ಸಿಬ್ಬಂದಿಗಳು ದಾಖಲಿಸಿಕೊಳ್ಳಲಿದ್ದಾರೆ. ನದಿಗಳಿಂದ ಹೂಳೆತ್ತುವ ಕಾರ್ಯವನ್ನು ನಗರಸಭೆ ಮತ್ತು ಮರಳು ದಾಸ್ತಾನು ಕೇಂದ್ರದ ಸಂಪೂರ್ಣ ನಿರ್ವಹಣೆಯನ್ನು ಕೆ.ಆರ್.ಐ.ಡಿ.ಎಲ್ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ನೋಡಿಕೊಳ್ಳಲಿದೆ ಎಂದರು.


ಉಡುಪಿ ಶಾಸಕ ಕೆ.ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್, ತಾಲೂಕು ಪಂಚಾಯತ್ ಅಧ್ಯಕ್ಷೆ ಸಂಧ್ಯಾ ಕಾಮತ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ನಾಯಕ್, ಉಪಾಧ್ಯಕ್ಷ ಹರೀಶ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!