ಉಡುಪಿಯಲ್ಲಿ ಮತ್ತೆ ಮರಳು
ಉಡುಪಿ- ಒಂದೂವರೆ ವರ್ಷಗಳಿಂದ ನೆನೆಗುದಿಗೆ ಬಿದ್ದು ಬಡ ಕಾರ್ಮಿಕರಿಗೆ ಮಾತ್ರವಲ್ಲದೆ ಕರಾವಳಿಯ ಆರ್ಥಿಕತೆಗೆ ಮಹಾ ಹೊಡೆತ ನೀಡಿದ್ದ ಮರಳು ಸಮಸ್ಯೆ ನಿವಾರಣೆಯಾಗಿ ಇಂದಿನಿಂದ ಮತ್ತೆ ಮರಳು ಗಣಿಗಾರಿಕೆಗೆ ಚಾಲನೆ ನೀಡಲಾಗಿದೆ.
ಜಿಲ್ಲೆಯ ನಾನ್ ಸಿಆರ್‌ಝೆಡ್ ವ್ಯಾಪ್ತಿಯಲ್ಲಿರುವ 48 ಪರವಾನಿಗೆದಾರರಿಗೆ ಮರಳುಗಾರಿಕೆಗೆ ಅನುಮತಿ ನೀಡಿದ್ದು ಉಡುಪಿಯ ಜಿಲ್ಲೆಯಲ್ಲಿ ಉಪ್ಪುರೂ, ಸಂತೆಕಟ್ಟೆ ಹಾಗು ಇನ್ನು ಹಲವೆಡೆ ನದಿ ಪಾತ್ರದಲ್ಲಿ ಕಾರ್ಮಿಕರು ಮರಳು ತೆಗೆಯುತ್ತಿದ್ದಾರೆ.
“ಮರಳು ಸಾಗಾಟ ಲಾರಿಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಈ ಕಾನೂನು/ಜಿಪಿಎಸ್ ಉಲ್ಲಂಘಿಸಿ ಮರಳನ್ನು ಅಕ್ರಮವಾಗಿ ಸಾಗಾಟ ಮಾಡಿದರೆ ಮೊದಲ ಬಾರಿಗೆ ದಂಡ ಹಾಗೂ ಪದೇ ಪದೇ ನಡೆದರೆ ಪರವಾನಿಗೆಯನ್ನೇ ರದ್ದು ಮಾಡಲಾಗುವುದೆಂದು” ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಳು ಸಿಗದೇ ವಾಣಿಜ್ಯ ಕ್ಷೇತ್ರಕ್ಕೆ ಸಾಕಷ್ಟು ಹಿನ್ನೆಡೆಯಾಗಿದೆ ಎನ್ನುವ ಮನವಿ ಮೇರೆಗೆ 170 ಮಂದಿಗೆ ಮರಳು ದಿಬ್ಬಗಳ ತೆರವಿಗೆ ಏಳು ಜನರ ಸಮಿತಿ ನಿರ್ಧರಿಸಿದೆ. ಈ ಪೈಕಿ 12 ಜನರಿಗೆ ಕ್ರಿಮಿನಲ್ ಮೊಕದ್ದಮೆವಿದ್ದು, 158 ಮಂದಿಗೆ ಮಾತ್ರವೇ ಪರವಾನಿಗೆ ನೀಡಿದ್ದೇವೆ. ಇನ್ನೆರಡು ದಿನಗಳಲ್ಲಿ ಮರಳು ದಿಬ್ಬಗಳ ಕಾಮಗಾರಿ ಆರಂಭವಾಗಲಿದೆ ಎಂದರು.
ಜಿಲ್ಲೆಯಿಂದ ಮರಳು ಹೊರಗೆ ಹೋಗದಂತೆ ಕ್ರಮ ಕೈಗೊಂಡಿದ್ದು, ಅಂತಹ ಪ್ರಯತ್ನಕ್ಕೆ ಮೊಕದ್ದಮೆ ಹೂಡಲಾಗುವುದು. ಈಗಾಗಲೇ 600 ರಿಂದ 700 ಲಾರಿಗಳಿಗೆ ಜಿಪಿಎಸ್ ಆಳವಡಿಸಲಾಗುತ್ತಿದೆ. ಇದನ್ನು ಉಲ್ಲಂಘಿಸಿದರೆ ಪರವಾನಿಗೆಯನ್ನೇ ರದ್ದು ಮಾಡಲಾಗುವುದೆಂದರು.
ಮರಳು ದಾಸ್ತಾನು ಮಾಡುವಂತಿಲ್ಲ: ಮನೆ, ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅಗತ್ಯವಿರುವಷ್ಟು ಮಾತ್ರವೇ ಮರಳು ಸಂಗ್ರಹ ಮಾಡಬೇಕು. ಹೆಚ್ಚಿನ ಹಣ ಕೊಟ್ಟು ಅನಧಿಕೃತ ವಾಗಿ ದಾಸ್ತಾನು ಕೂಡಾ ಮಾಡಿ ಕಳ್ಳ ಸಂತೆಯಲ್ಲಿ ಮಾರಾಟ ಮಾಡುವಂತಿಲ್ಲ. ಈ ರೀತಿ ದಾಸ್ತಾನು ಮಾಡಿದರೆ ಲಾರಿ, ಜಾಗದ ಮಾಲೀಕರು ಹಾಗೂ ಸಂಬಂಧಪಟ್ಟವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
ಜಿಲ್ಲೆಗೆ 2.5 ಮೆಟ್ರಿಕ್ ಟನ್ ಸಾಕು: ಜಿಲ್ಲೆಗೆ ಸರಾಸರಿ 2.5 ಮೆಟ್ರಿಕ್ ಟನ್ ಮರಳು ಸಾಕು. ಪ್ರಸ್ತುತ 8 ಮರಳು ದಿಬ್ಬಗಳನ್ನು ಗುರುತಿಸಿ 8 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಮರಳು ಇರುವ ಬಗ್ಗೆ ಗುರುತಿಸಲಾಗಿದೆ. ನಾನಾ ಸಿಆರ್‌ಝಡ್ ವ್ಯಾಪ್ತಿಯಲ್ಲಿ 24 ಕಡೆಗಳಲ್ಲಿ ಗುರುತು ಮಾಡಿ ಟೆಂಡರ್ ಕರೆದಿದ್ದು, ಇಬ್ಬರಿಗೆ ಟೆಂಡರ್ ಆಗಿದೆ. ಉಳಿದ 22 ಕಡೆಗಳಲ್ಲಿ ಮರಳಿದ್ದು, ಟೆಂಡರ್ ಸರಳೀಕರಣಕ್ಕೆ ಲಿಖಿತವಾಗಿ ಕೇಳಿಕೊಂಡಿದ್ದೇವೆ. ಈ ಬಗ್ಗೆ ಅನುಮತಿ ಸಿಕ್ಕ ಕೂಡಲೇ ನೀಡುತ್ತೇವೆ ಎಂದರು.
ಪಾದೂರು ಎರಡನೇ ಹಂತದ ವಿಸ್ತರಣೆ ಕಾಮಗಾರಿಗೆ ಸಹಕಾರ ನೀಡುವಂತೆ ಕಂಪನಿಯಿಂದ ಅರ್ಜಿ ಬಂದಿದೆ. ಈ ಬಗ್ಗೆ ಸಾರ್ವಜನಿಕರನ್ನು ಕರೆದು ಕೇಳಿದ್ದು, ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಹೆಚ್ಚಿನ ಪರಿಹಾರ ನೀಡುವಂತೆ ಬೇಡಿಕೆಯೂ ಇದೆ. ಜಾಗಕ್ಕೆ ದರ ನಿಗದಿ ಮಾಡುವ ಜವಾಬ್ದಾರಿ ಜಿಲ್ಲಾಡಳಿತಕ್ಕಿದ್ದು, ನ್ಯಾಯ ನೀಡುವುದಾಗಿ ತಿಳಿಸಿದ್ದೇವೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸಮಸ್ಯೆ ಇತ್ಯರ್ಥ ಸರಿಪಡಿಸುತ್ತೇವೆ ಎಂದರು.
Kindly stop these kind of illegal sand mining activities,otherwise we all have to suffer the natural disaster that lies ahead.