ಸಮುದಾಯೋತ್ಸವ-2020 ವಿಶೇಷ ಸಂಚಿಕೆ ಅನಾವರಣ
ಉಡುಪಿ: ಯಾವುದೇ ಸಂಘಟನೆಯ ವಿಚಾರಗಳು ದಾಖಲಿಕರಣಗೊಂಡಾಗ ಅದು ಮುಂದಿನ ಪೀಳಿಗೆಗೆ ನೆನಪಾಗಿ ಉಳಿಯಲು ಸಹಕಾರಿಯಾಗುತ್ತದೆ ಎಂದು ಹಿರಿಯ ಪತ್ರಕರ್ತ ಶಶಿಧರ ಮಾಸ್ತಿಬೈಲು ಹೇಳಿದರು.
ಅವರು ಶನಿವಾರ ಕೆಥೊಲಿಕ್ ಉಡುಪಿ ಪ್ರದೇಶ್ ಇದರ ವತಿಯಿಂದ ಉಡುಪಿ ಧರ್ಮಪ್ರಾಂತ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ 2020 ಜನವರಿ 19ರಂದು ಕಲ್ಯಾಣಪುರದ ಮೌಂಟ್ ರೋಜರಿ ಚರ್ಚಿನ ಮೈದಾನದಲ್ಲಿ ಆಯೋಜಿಸಿರುವ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಚಾರಿತ್ರಿಕ ಸಮ್ಮೇಳನ ಸಮುದಾಯೋತ್ಸವ-2020 ಇದರ ಪ್ರಯುಕ್ತ ಹೊರತರಲಾದ ಆಮ್ಚೊ ಸಂದೇಶ್ ವಿಶೇಷ ಪುರವಣಿ ಬಿಡುಗಡೆಗೊಳಿಸಿ ಮಾತನಾಡಿದರು.
ಸಂಘಟನೆಗಳು ಬೆಳೆದು ಬಂದ ದಾರಿ ಸಮಾಜದ ಮುಂದಿನ ಪೀಳಿಗೆಗೆ ತಲುಪಿಸಲು ದಾಖಲಿಕರಣ ಉತ್ತಮ ದಾರಿಯಾಗಿದ್ದು ಈ ನಿಟ್ಟಿನಲ್ಲಿ ಸಂಘಟನೆ ಆಯೋಜಿಸಿರುವ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಪತ್ರಕರ್ತ ಜಾನ್ ಡಿಸೋಜಾ, ಕುಂದಾಪುರ (ಸಮೂಹ ಮಾಧ್ಯಮ), ಪ್ರಗತಿಪರ ಕೃಷಿಕ ಜೂಲಿಯನ್ ದಾಂತಿ (ಭತ್ತದ ಕೃಷಿ), ಸಮಾಜ ಸೇವಕ ರೋಶನ್ ಡಿಸೋಜಾ ಬೆಳ್ಮಣ್ (ಸಮಾಜಸೇವೆ), ನಾಟಿ ವೈದ್ಯ ಜೆರೋಮ್ ಫ್ರಾನ್ಸಿಸ್ ಅಂದ್ರಾದೆ ಕಲ್ಮಾಡಿ (ಮನೆ ಮದ್ದು) ವಿಭಾಗಗಳಲ್ಲಿ ಆಯ್ಕೆ ಮಾಡಲಾಗಿದ್ದು, ಸಹಕಾರಿ ಧುರೀಣ ಜಾನ್ ಡಿಸಿಲ್ವಾ ಇವರಿಗೆ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸಮಾವೇಶದ ಉದ್ಘಾಟನೆ ಬೆಳಿಗ್ಗೆ 10.00 ಕ್ಕೆ ಜರುಗಲಿದ್ದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಉತ್ತರಾಖಂಡ್ ಮಾಜಿ ರಾಜ್ಯಪಾಲೆ ಮಾರ್ಗರೆಟ್ ಆಳ್ವಾ ಭಾಗವಹಿಸಲಿದ್ದು, ಕ್ರೈಸ್ತ ಸಮುದಾಯದ ಪ್ರಸ್ತುತ ಪರಿಸ್ಥಿತಿ ಮತ್ತು ಭವಿಷ್ಯದ ದೃಷ್ಟಿಕೋನ ವಿಚಾರದಲ್ಲಿ ಮಾಜಿ ಶಾಸಕ ಹಾಗೂ ನಿವೃತ್ತ ಕೆ ಎಸ್ ಅಧಿಕಾರಿ ಜೆ ಆರ್ ಲೋಬೊ ಪ್ರಧಾನ ಭಾಷಣ ಮಾಡಲಿದ್ದಾರೆ.
ಬಿಡುಗಡೆ ಸಮಾರಂಭದಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ನಿಕಟಪೂರ್ವ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್, ಮಾಜಿ ಅಧ್ಯಕ್ಷರಾದ ವಾಲ್ಟರ್ ಸಿರಿಲ್ ಪಿಂಟೊ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್ ಉಪಸ್ಥಿತರಿದ್ದರು