ಒಡನಾಡಿಯಿಲ್ಲದೆ ಅನಾಥವಾದ ಕೇಸರಿ ಟೋಪಿ
ಉಡುಪಿ: ಪೇಜಾವರ ಶ್ರೀಗಳು ಹೊರಗ ಕಾಣಿಸಿಕೊಂಡಿದ್ದ ಬಹುತೇಕ ಬಾರಿ ಟೋಪಿಧಾರಿಗಳಾಗಿಯೇ ಕಾಣಿಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಆ ಟೋಪಿಯ ಹಿಂದಿರುವ ರಹಸ್ಯವೇನೆಂದು ನಿಮಗೆ ಗೊತ್ತೇ?
ಶ್ರೀಗಳು ತಮ್ಮ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದ್ದರು. ಟೋಪಿ ಧರಿಸುವುದಕ್ಕೆ ಆರೋಗ್ಯ ಕಾಳಜಿ ಹಾಗೂ ಧರ್ಮದ ಕಾರಣ ಕೂಡ ಇದೆ. ಪೇಜಾವರ ಶ್ರೀಗಳು ಧರಿಸುತ್ತಿದ್ದ ಹೆಚ್ಚಿನ ಟೋಪಿಗಳು ಕೇಸರಿ ಟೋಪಿಗಳಾಗಿಯೇ ಇರುತ್ತಿದ್ದವು.
ಕೇಸರಿ ಬಣ್ಣ ಧರ್ಮದ ಸಂಕೇತವಾದರೆ, ಟೋಪಿ ಶೀತಬಾದೆಯಿಂದ ರಕ್ಷಿಸುವುದಾಗಿತ್ತು. ನಿರಂತರ ಪ್ರವಾಸದಲ್ಲಿರುತ್ತಿದ್ದ ಶ್ರೀಗಳಿಗೆ ಬದಲಾದ ವಾತಾವರಣ ಅನಾರೋಗ್ಯವನ್ನು ತಂದೊಡ್ಡುತ್ತಿತ್ತು.
ಹೀಗಾಗಿ ನೆಗಡಿ, ಶೀತ, ಜ್ವರದಿಂದ ದೇಹವನ್ನು ದೂರವಿಡಲು ಟೋಪಿಯನ್ನು ಧರಿಸುತ್ತಿದ್ದರು. ಸಾಮಾನ್ಯವಾಗಿ ಪ್ರವಾಸ ಮಾಡುವಾಗಲೆಲ್ಲಾ ಟೋಪಿಧಾರಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಇದಲ್ಲದೆ, ವಿದ್ಯಾರ್ಥಿಗಳಿಗೆ ಪ್ರವಚನ ಮಾಡುವಾಗಲೂ ಶ್ರೀಗಳು ಟೋಪಿ ಧರಿಸುತ್ತಿದ್ದರು. ಶ್ರೀಗಳು ಎಸಿ ಹಾಗೂ ಫ್ಯಾನ್ ಗಳನ್ನು ಬಳಸುತ್ತಿರಲಿಲ್ಲ. ಕಾರಿನಲ್ಲಿಯೂ ಕೂಡ ಕಿಟಕಿಗಳು ಸದಾ ಮುಚ್ಚಿರುತ್ತಿದ್ದವು. ಶ್ರೀಗಳ ಬದುಕಿನುದ್ದಕ್ಕೂ ಒಡನಾಡಿಯಾಗಿದ್ದ ಕೇಸರಿ ಟೋಪಿ ಇದೀಗ ಒಂಟಿಯಾಗಿದೆ.