ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಪರಿಹಾರ ನಿಧಿಗೆ 1 ಕೋಟಿ ರೂ.: ರಾಜೇಂದ್ರ ಕುಮಾರ್

ಮಂಗಳೂರು : (ಉಡುಪಿ ಟೈಮ್ಸ್ ವರದಿ) ವಿಶ್ವವನ್ನೇ ತಲ್ಲಣಗೊಳಿಸಿರುವ ಕೋರೋನ ಮಹಾಮಾರಿಯ ವಿರುದ್ಧ ರಾಜ್ಯ ಸರಕಾರ ಕೈಗೊಳ್ಳುತ್ತಿರುವ ಕಾರ್ಯಗಳಿಗೆ ಸಹಕಾರಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 1 ಕೋಟಿ ರೂ., ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ 50 ಲಕ್ಷ ರೂ., ಮತ್ತು ಎಸ್ಸಿಡಿಸಿಸಿ ಬ್ಯಾಂಕ್ ನೌಕರರ ಒಂದು ದಿನದ ವೇತನವನ್ನು ನೀಡಲಾಗುವುದು. ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ನಿಂದ 50 ಸಾವಿರ ಮಾಸ್ಕ್ ವಿತರಿಸಲಾಗುವುದು ಎಂದು ಎಸ್ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ. ಎನ್ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ. 

ಕೋರೊನ ವಿರುದ್ಧ ಕಾರ್ಯಾಚರಣೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಸಹಕಾರ ಸಂಘ ಸಂಸ್ಥೆಗಳು, ಉದ್ಯಮಿಗಳು ಮತ್ತು ಜನತೆ ಹೆಚ್ಚಿನ ಆರ್ಥಿಕ ನೆರವನ್ನು ನೀಡುವಂತೆ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಜನತೆಯಲ್ಲಿ ವಿನಂತಿಸಿಕೊಂಡಿದ್ದಾರೆ.

ಕೋರೊನ ವಿರುದ್ಧ ಹೋರಾಟದಲ್ಲಿ ಕೈಜೋಡಿಸುವಂತೆ ಈಗಾಗಲೇ ಮುಖ್ಯಮಂತ್ರಿ ಮತ್ತು ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಮನವಿ ಮಾಡಿದ್ದು, ಸಹಕಾರಿಗಳು, ಸಹಕಾರಿ ಸಂಸ್ಥೆಗಳು, ಉದ್ಯಮಿಗಳು ಮತ್ತು ಜನತೆ ಒಗ್ಗೂಡಿ ಗರಿಷ್ಠ ದೇಣಿಗೆಯನ್ನು SCDCC Bank, Kodialbail Branch, A/c No.505/757 Covid -19. Relief Fund ಖಾತೆಗೆ ನಗದು ಚೆಕ್ ಆರ್ಟಿಜಿಎಸ್ ಮುಖಾಂತರ ನೀಡಬಹುದು. ಸಂಗ್ರಹವಾದ ಮೊತ್ತವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಹಕಾರ ಸಚಿವ ಎಸ್. ಟಿ ಸೋಮಶೇಖರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ರಾಜೇಂದ್ರ ಕುಮಾರ್ ತಿಳಿಸಿದ್ದಾರೆ. 

ಕೋರನ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಎಸ್ಸಿಡಿಸಿಸಿ ಬ್ಯಾಂಕಿನ 105 ಶಾಖೆಗಳ ವ್ಯವಹಾರದ ಸಮಯವನ್ನು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ನಿಗದಿಗೊಳಿಸಲಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಸಹಕಾರಿ ಸಂಘಗಳಿಗೂ ಇದೇ ಸಮಯದಲ್ಲಿ ವ್ಯವಹರಿಸುವಂತೆ ಸೂಚಿಸಲಾಗಿದೆ. ರೈತರಿಗೆ ಅಡಿಕೆ ಅಡಮಾನ ಸಾಲ ನೀಡುವುದು ಮತ್ತು ಪಡಿತರ ವ್ಯವಸ್ಥೆಯನ್ನು ಸಮರ್ಪಕವಾಗಿ ನೀಡುವ ಜೊತೆಗೆ ಸಹಕಾರ ಸಂಸ್ಥೆಗಳು ಬ್ಯಾಂಕಿಂಗ್ ಸೇವೆಯನ್ನು ನಿಗದಿತ ಸಮಯದಲ್ಲಿ ನೀಡುವಂತೆಯೂ ಡಾ.ಎಂ.ಎನ್. ರಾಜೇಂದ್ರ  ಕುಮಾರ್ ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!