ಅಡುಗೆ ಅನಿಲ ದರ ಏರಿಕೆ, ಸಬ್ಸಿಡಿ ತ್ಯಾಗ ಮಾಡಿದ ಜನತೆಗೆ ಹೊಡೆತ: ಭಾಸ್ಕರ್ ರಾವ್

ಉಡುಪಿ: ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸುವಂತೆಯೇ ಕೇಂದ್ರ ಸರಕಾರ ಒಂದೇ ದಿನದಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲ ದರವನ್ನು ಪ್ರತಿ ಸಿಲಿಂಡರ್‌ಗೆ ರೂ.145 ಏರಿಕೆ ಮಾಡಿದೆ. ರೂ.697 ಇದ್ದ 14.2 ಕೆ.ಜಿ ಸಿಲಿಂಡರ್ ಬೆಲೆಯನ್ನು ರೂ.842.ಗೆ ಹೆಚ್ಚಿಸಲಾಗಿದೆ. ಸರಕಾರವು ಗೃಹ ಬಳಕೆದಾರರಿಗೆ ನೀಡುವ ಸಬ್ಸಿಡಿ ದರವನ್ನು ರೂ154 ರಿಂದ ರೂ.291 ಕ್ಕೆ ಏರಿಕೆ ಮಾಡಲಾಗಿದ್ದರೂ ಸಬ್ಸಿಡಿ ಪಡೆಯುವ ಗ್ರಾಹಕರು ರೂ.8 ನ್ನು ಹೆಚ್ಚುವರಿಯಾಗಿ ನೀಡಬೇಕಾಗಿದೆ.

ಕೇಂದ್ರ ಸರಕಾರದ ಈ ನಡೆಯಿಂದ ದೇಶದ ಹಿತಕ್ಕಾಗಿ ಸಬ್ಸಿಡಿ ತ್ಯಾಗ ಮಾಡಿದ ಗ್ರಾಹಕರಿಗೆ ಒಮ್ಮೆಲೆ ರೂ.145 ಹೆಚ್ಚುವರಿ ಹೊಡೆತ ಬೀಳುವುದರೊಂದಿಗೆ 2014ರ ಬಳಿಕ ಅಡುಗೆ ಅನಿಲದ ಸಿಲಿಂಡರ್ ದರ ಗರಿಷ್ಠ ಮಟ್ಟದಲ್ಲಿ ಏರಿಕೆ ಕಂಡಂತಾಗಿದೆ. ದೇಶವು ನಿರುದ್ಯೋಗ ಹಾಗೂ ಆರ್ಥಿಕ ಸಂಕಷ್ಟದ ತೀವ್ರ ಬಿಕ್ಕಟ್ಟಿನಲ್ಲಿ ಸಿಲುಕಿರುವಾಗ ಎಲ್.ಪಿ.ಜಿ. ದರ ಏರಿಕೆ ಮಾಡುವ ಮೂಲಕ ಮೋದಿ ಸರಕಾರವು ಜನತೆಗೆ ಆಘಾತವನ್ನುಂಟು ಮಾಡಿದೆ.


ಯು.ಪಿ.ಎ. ಸರಕಾರದ ಅವಧಿಯಲ್ಲಿ ಬೆಲೆ ಏರಿಕೆ ಬಗ್ಗೆ ನಿರಂತರ ಪ್ರತಿಭಟನೆ ಮೂಲಕ ವಿರೋಧಿಸುತ್ತಿದ್ದ ಬಿಜೆಪಿ ತನ್ನ ಆಡಳಿತಾವಧಿಯಲ್ಲಿ ಬೆಲೆ ಏರಿಕೆಯನ್ನು ನಿರಂತರ ಕಾಯಕವನ್ನಾಗಿಸಿಕೊಂಡಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಬಿಜೆಪಿ ಪ್ರತಿಭಟಿಸುವ ಹಕ್ಕನ್ನು ಕಳೆದುಕೊಂಡಂತಾಗಿದೆ. ಈಗಾಗಲೇ ಬಡ ಹಾಗೂ ಮಧ್ಯಮ ವರ್ಗದ ಜನತೆ ನಾನಾ ಪದಾರ್ಥಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದು ಏತನ್ಮಧ್ಯೆ ಸರಕಾರದ ಎಲ್.ಪಿ.ಜಿ. ದರ ಏರಿಕೆ ತೀರ್ಮಾನ ಜನತೆಗೆ ಸಂಕಷ್ಟವನ್ನುಂಟು ಮಾಡಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!