ಚಿತ್ರೀಕರಣ ಮುಗಿಸಿದ ನೈಜ ಘಟನಾಧಾರಿತ ‘ರಿಪ್ಪರ್’
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ನಲುವತ್ತು ವರ್ಷಗಳ ಹಿಂದೆ ಜನರ ಮನಸಲ್ಲಿ ಭೀತಿ ಹುಟ್ಟಿಸಿದ್ದ, ಕುಖ್ಯಾತ ದರೋಡೆಕೋರ ರಿಪ್ಪರ್ ಚಂದ್ರನ್ ಘಟನಾಧಾರಿತ ವಿಚಾರಗಳುಳ್ಳ ‘ರಿಪ್ಪರ್’ ಚಲನಚಿತ್ರದ ಚಿತ್ರೀಕರಣವು ಸಂಪೂರ್ಣಗೊಂಡಿದೆ.
ಜಿ.ಕೆ ರಿಯಲ್ ಇಮೇಜಸ್ ಲಾಂಛನದಲ್ಲಿ ಗೋಪಾಲಕೃಷ್ಣ ಹಾಗೂ ಸ್ನೇಹಿತರು ನಿರ್ಮಾಣ ಮಾಡಿರುವ ‘ರಿಪ್ಪರ್’ ಚಿತ್ರಕ್ಕೆ ಕೃಷ್ಣ ಬೆಳ್ತಂಗಡಿ ಇವರ ನಿರ್ದೇಶನವಿದೆ. ಈ ಹಿಂದೆ ‘ಬಣ್ಣದ ಕೊಡೆ’ ಅನ್ನುವ ಕಲಾತ್ಮಕ ಚಿತ್ರ ನಿರ್ದೇಶನ ಮಾಡಿ ಗಮನಸೆಳೆದಿದ್ದ ಕೃಷ್ಣ ಬೆಳ್ತಂಗಡಿ, ನಂತರ ದಾರಾವಾಹಿಗಳಿಗೆ ಸಂಭಾಷಣಾಕಾರರಾಗಿ ಗುರುತಿಸಿಕೊಂಡಿದ್ದರು. ನೂರಕ್ಕೂ ಹೆಚ್ಚು ಜಾಹೀರಾತು ಚಿತ್ರ ಹಾಗೂ ನೂರ ಐವತ್ತಕ್ಕೂ ಹೆಚ್ಚು ಸಾಕ್ಷ್ಯ ಚಿತ್ರ ನಿರ್ದೇಶನ ಮಾಡಿರುವ ಕೃಷ್ಣ ಬೆಳ್ತಂಗಡಿ ಅವರು ತಮ್ಮ ಮೊದಲ ಚಿತ್ರದ ನಂತರ ಸುಮಾರು ನಾಲ್ಕು ವರ್ಷದ ಅಂತರದ ನಂತರ ಮತ್ತೆ ‘ರಿಪ್ಪರ್’ ಚಿತ್ರದ ಮೂಲಕ ಹಿರಿತೆರೆಗೆ ಹಿಂತಿರುಗಿದ್ದಾರೆ.
‘ರಿಪ್ಪರ್’ ಚಿತ್ರದ ಚಿತ್ರೀಕರಣವು ಮಂಗಳೂರು, ಆಗುಂಬೆ ಪರಿಸರ ಮತ್ತು ಬೆಂಗಳೂರಿನ ಪರಿಸರದಲ್ಲಿ ಎರಡು ಹಂತದಲ್ಲಿ ಒಟ್ಟು 30 ದಿನಗಳ ಕಾಲ ನಡೆದಿದೆ.
ಕನ್ನಡ ತಮಿಳು ನಟ ಹಾಗೂ ರಂಗಭೂಮಿ ಕಲಾವಿದ ಕೌಸ್ತುಭ್ ಜಯಕುಮಾರ್ ದರೋಡೆಕೋರನ ಪಾತ್ರದಲ್ಲಿ ನಟಿಸಿದ್ದು, ಇವರಿಗೆ ಮುಂಬಯಿಯ ಬೆಡಗಿ ಅಮುಲ್ ಗೌಡ ಸಾಥ್ ನೀಡಿದ್ದಾರೆ. ನಾಯಕನ ಪಾತ್ರದಲ್ಲಿ ರಾಧಾರಮಣ ದಾರಾವಾಹಿಯ ಸುಮೇದು ಖ್ಯಾತಿಯ ಶ್ರೀರಾಮ್, ನಾಯಕಿಯಾಗಿ ಕೊಡಗಿನ ಬೆಡಗಿ ಸಾನ್ವಿ ನಟಿಸಿದ್ದಾರೆ. ಉಳಿದಂತೆ ತಾರಾಗಣದಲ್ಲಿ ಸಿನಿಮಾ ಹಾಗೂ ದಾರಾವಾಹಿಗಳ ಬಹುತೇಕ ಪ್ರಮುಖ ಕಲಾವಿದರು ನಟಿಸಿದ್ದು, ಇದೀಗ ಎಡಿಟಿಂಗ್ ಶುರು ಆಗುವ ಮೂಲಕ ಪ್ರೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಚಿತ್ರಕ್ಕೆ ಅನಿಲ್ಕುಮಾರ್ ಛಾಯಾಗ್ರಹಣವಿದ್ದು, ಮಂಜುನಾಥ ಹುಣಸೂರು, ಪ್ರಭಾಕರ ಪ್ರಭು ಹಾಗೂ ಅರ್ಪಿತಾ ಮೈಸೂರು ಇವರ ಸಹ ನಿರ್ದೇಶನವಿದೆ. ಹಿತನ್ ಹಾಸನ್ ಸಂಗೀತ, ಮುಕ್ತರಾಜು ಅವರ ಸಂಕಲನ ಈ ಚಿತ್ರಕ್ಕಿದೆ.