‘ಹಳ್ಳಿಗಳಿಗೆ ನಡೆಯಿರಿ ಅಧಿಕಾರಿಗಳೇ’ ಕಾರ್ಯಕ್ರಮ: ಆರ್.ಅಶೋಕ್

ಉಡುಪಿ : ಕಂದಾಯ ಇಲಾಖೆ ವತಿಯಿಂದ, ಜನರ ಮನೆ ಬಾಗಿಲಿಗೇ ತೆರಳಿ ಸೌಲಭ್ಯ ವಿತರಿಸುವ “ಹಳ್ಳಿಗಳಿಗೆ ನಡೆಯಿರಿ ಅಧಿಕಾರಿಗಳೇ” ಎಂಬ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಅವರು ಬುಧವಾರ ಉಡುಪಿಯಲ್ಲಿ, ನೂತನವಾಗಿ ನಿರ್ಮಾಣಗೊಂಡ 10 ಕೋಟಿ ವೆಚ್ಚದ ಮಿನಿ ವಿಧಾನಸೌಧ ಕಟ್ಟಡ ಉದ್ಘಾಟಿಸಿ ಮಾತನಾಡಿದರು.


ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರರು ಪ್ರತಿ ತಿಂಗಳಲ್ಲಿ ಒಂದು ದಿನ, ತಮ್ಮ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಬಾಕಿ ಇರುವ ಗ್ರಾಮಗಳ ಸಾರ್ವಜನಿಕರ ಅರ್ಜಿಗಳನ್ನು ಅವರ ಮನೆ ಬಾಗಿಲಿಗೇ ತೆರಳಿ,
ಸಮಸ್ಯೆ ಆಲಿಸಿ, ಸ್ಥಳದಲ್ಲೇ ಬಗೆಹರಿಸುವ ಕಾರ್ಯಕ್ರಮ ಇದಾಗಿದ್ದು, ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ನಿರ್ದಿಷ್ಟ ದಿನಾಂಕ ನಿಗಧಿ ಶೀಘ್ರದಲ್ಲಿ ನಡೆಯಲಿದೆ ಎಂದು ಸಚಿವ ಆಶೋಕ್ ಹೇಳಿದರು.

ರಾಜ್ಯದಲ್ಲಿ ಪ್ರತಿ ವರ್ಷ ಪಿಂಚಣಿ ಯೋಜನೆಗಾಗಿ 7500 ಕೋಟಿ ರೂ. ವೆಚ್ಚ ಮಾಡುತ್ತಿದ್ದು, ಈ ಯೋಜನೆಗಳು ಕೆಲವು ಅನರ್ಹರ ಪಾಲಾಗಿರುವುದನ್ನು ತಪ್ಪಿಸಲು ಫಲಾನುಭವಿಗಳನ್ನು ಆಧಾರ್ ಲಿಂಕ್ ಮಾಡುತ್ತಿದ್ದು, ಇದರಿಂದ ಅನರ್ಹರ
ಪಾಲಾಗುತ್ತಿರುವ 800 ರಿಂದ 900 ಕೋಟಿ ರೂ. ಉಳಿತಾಯವಾಗಲಿದೆ,

ಆಧಾರ್‍ನಲ್ಲಿನ ಜನ್ಮ ದಿನಾಂಕ ದಾಖಲೆ ಬಳಸಿಕೊಂಡು ಅರ್ಹ ವೃದ್ಧರ ಮನೆ ಬಾಗಿಲಿಗೇ ತೆರಳಿ ಪಿಂಚಣಿ ಮಂಜೂರು ಮಾಡುವ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲು ನಿರ್ಧರಿಸಿದ್ದು, ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಪೈಲಟ್ ಯೋಜನೆಯಾಗ ಜಾರಿಗೊಳಿಸಿದ್ದು, 2000 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಶೀಘ್ರದಲ್ಲಿ ಅವರ ಮನೆ ಬಾಗಲಿಗೆ ತೆರಳಿ ಪಿಂಚಣಿ ಮಂಜೂರು ಮಾಡಲಾಗುವುದು ಎಂದ ಸಚಿವರು, ರಾಜ್ಯದ ಪ್ರತಿ ಗ್ರಾಮದಲ್ಲೂ ಸ್ಮಶಾನಕ್ಕೆ ಜಾಗ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ರಾಜ್ಯದಲ್ಲಿ ಬಾಕಿ ಇದ್ದ ಶವ ಸಂಸ್ಕಾರ ಪರಿಹಾರದ ಮೊತ್ತ 70 ಕೋಟಿ ರೂ. ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದರು.


ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ಕಂದಾಯ ವಿಭಾಗ ಮಾತ್ರ ಇದ್ದು, ಇದರಿಂದ ಎಲ್ಲಾ ತಾಲೂಕುಗಳ ಸಾರ್ವಜನಿಕರು ಅಲ್ಲಿಗೇ ತೆರಳುವುದಕ್ಕೆ ತೊಂದರೆಯಾಗುತ್ತಿರುವುದನ್ನು ಮನಗಂಡು ಉಡುಪಿಯಲ್ಲಿ ಒಂದು ಕಂದಾಯ ಉಪ ವಿಭಾಗ ತೆರೆಯಲಾಗುವುದು
ಎಂದರು. ಮಿನಿ ವಿಧಾನಸೌಧದಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಸಂಸದೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರಾಜ್ಯದ ವಸತಿ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ವಿ.ಸೋಮಣ್ಣ, ಗೃಹ, ಸಹಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಬಸವರಾಜ ಬೊಮ್ಮಾಯಿ, ಉಡುಪಿ ಜಿ.ಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಉಡುಪಿ ಶಾಸಕ ರಘುಪತಿ ಭಟ್, ಕಾರ್ಕಳ ವಿ.ಸುನೀಲ್ ಕುಮಾರ್, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ , ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಪವಿಭಾಗಾಧಿಕಾರಿ ರಾಜು ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಸ್ವಾಗತಿಸಿದರು. ಕುದಿ ವಸಂತ ಶೆಟ್ಟಿ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!