ನಿವೃತ್ತ ಎಸ್‌ಪಿ ಅಪ್ಪಯ್ಯ ಅವರ ಆರೋಪ ವಿಷಾದಕರ : ಕುಂಜಿಲ ಗ್ರಾಮಸ್ಥರಿಗೆ ಬೇಸರ

ಮಡಿಕೇರಿ- ಕಾಕೋಟುಪರಂಬು ಗ್ರಾ.ಪಂ ವ್ಯಾಪ್ತಿಯ ಕುಂಜಿಲಗೇರಿ-ಬಾವಲಿ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ೫ ಲಕ್ಷ ರೂ. ಈಗಾಗಲೆ ಮಂಜೂರಾಗಿದ್ದು, ಕಾಮಗಾರಿ ಸಧ್ಯದಲ್ಲೆ ಆರಂಭವಾಗಲಿದೆ ಎಂದು ಸ್ಪಷ್ಟಪಡಿಸಿರುವ ಕುಂಜಿಲಗೇರಿ ಸಮಾಜ ಸೇವಕ ಹಾಗೂ ಬಿಜೆಪಿ ಕಾರ್ಯಕರ್ತ ಚರಮಂಡ ಅಪ್ಪುಣು ಪೂವಯ್ಯ, ನಿವೃತ್ತ ಎಸ್‌ಪಿ ಮುಕ್ಕಾಟಿರ ಚೋಟು ಅಪ್ಪಯ್ಯ ಅವರು ಅಭಿವೃದ್ಧಿ ಕಾರ್ಯದ ಕುರಿತು ಮಾಡಿರುವ ಟೀಕೆಗಳು ಅರ್ಥಹೀನವೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂಜಿಲಗೇರಿ ಗ್ರಾಮದ ಸರ್ವ ಜನರು ಒಗ್ಗಟ್ಟಿನಿಂದ ಜೀವನ ಸಾಗಿಸುತ್ತಿದ್ದು, ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಊರಿನವರೊಂದಿಗೆ ಚರ್ಚಿಸಿ ಅನಷ್ಟಾನಕ್ಕೆ ತರುರಲಾಗುತ್ತಿದೆ. ಆದರೆ, ರಾಜಕೀಯ ದುರುದ್ದೇಶದಿಂದ ತಮ್ಮ ಮನೆ ವ್ಯಾಪ್ತಿಗೆ ರಸ್ತೆಯನ್ನು ನಿರ್ಮಿಸಿಕೊಡುತ್ತಿಲ್ಲವೆಂದು ಚೋಟು ಅಪ್ಪಯ್ಯ ಅವರು ಮಾಡಿರುವ ಆರೋಪ ಅತ್ಯಂತ ವಿಷಾದಕರವೆಂದರು.
ಕಳೆದ ಹಲವು ವರ್ಷಗಳಿಂದ ಮುಕ್ಕಾಟಿರ ಕುಟುಂಬಸ್ಥರ ಐನ್ ಮನೆ, ದೇವಾಲಯ ಮತ್ತು ಅಕ್ಕಪಕ್ಕದ ಪ್ರದೇಶಗಳ ರಸ್ತೆಯ ಅಭಿವೃದ್ಧಿಗಾಗಿ ಶಾಸಕರ ಹಾಗೂ ಸಂಸದರ ನಿಧಿಯಿಂದ ಹಣವನ್ನು ವಿನಿಯೋಗಿಸಲಾಗಿದೆ. ಅದೇ ರೀತಿಯಾಗಿ ಕಾಮಗಾರಿಗಳು ನಡೆದಿದೆ. ಜನಪ್ರತಿನಿಧಿಗಳ ಅನುದಾನವನ್ನು ಯಾವ ಊರಿನ ಜನರಿಗೂ ನೋವಾಗದ ರೀತಿಯಲ್ಲಿ ಸಮಾನ ರೀತಿಯಲ್ಲಿ ಹಂಚಿಕೆ ಮಾಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಅದೇ ಪ್ರಕಾರವಾಗಿ ಈ ಬಾರಿ ಕುಂಜಿಲಗೇರಿ-ಬಾವಲಿ ಸಂಪರ್ಕ ರಸ್ತೆಯ ಅಭಿವೃದ್ಧಿಗೆ 5 ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸುಮಾರು 23 ವರ್ಷಗಳ ಹಿಂದೆ ಬೆಟ್ಲಪ್ಪ ಎಂಬಲ್ಲಿ ನಿರ್ಮಿಸಲಾದ ನೀರಿನ ಟ್ಯಾಂಕಿನ ಉಪಯೋಗ ಯಾರಿಗೂ ಆಗುತ್ತಿಲ್ಲವೆಂದು ಚೋಟು ಅಪ್ಪಯ್ಯನವರು ಆರೋಪಿಸಿದ್ದು, ಇದರಲ್ಲಿ ಯಾವುದೇ ಹುರುಳಿಲ್ಲ. ಟ್ಯಾಂಕ್ ಇರುವ ಪ್ರದೇಶದಲ್ಲಿ ಕುಡಿಯುವ ನೀರು ಸರಬರಾಜಾಗುತ್ತಿದೆ ಎಂದು ಅಪ್ಪುಣು ಪೂವಯ್ಯ ಸ್ಪಷ್ಟಪಡಿಸಿದರು.

ಒಂದು ಗ್ರಾಮದ ಅಭಿವೃದ್ಧಿಯಾಗಬೇಕಾದರೆ ಸ್ಫಳೀಯ ನಿವಾಸಿಗಳು ಪರಸ್ಪರ ಚರ್ಚಿಸಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕಾಗಿದೆ. ಆದರೆ, ಹಿರಿಯರಾದ ಚೋಟು ಅಪ್ಪಯ್ಯ ಅವರು, ರಾಜಕೀಯ ದುರುದ್ದೇಶ ಎನ್ನುವ ಪದಬಳಕೆ ಮಾಡುವ ಮೂಲಕ ಸದಾ ಜನ ಸಾಮಾನ್ಯರ ಪರವಾಗಿ ಕಾರ್ಯನಿರ್ವಹಿಸುತ್ತಿರುವ ತನಗೆ ಬೇಸರ ಮೂಡಿಸಿದ್ದಾರೆ ಎಂದು ಅಪ್ಪುಣು ಪೂವಯ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ ಸದಸ್ಯರುಗಳಾದ ಕುಳಿಯಕಂಡ ಪೊನ್ನಣ್ಣ, ಅಲ್ಲಪ್ಪೀರ ಶ್ವೇತ ನಾಣಯ್ಯ ಹಾಗೂ ಕುಂಜಿಲಗೇರಿ ದೇವಸ್ಥಾನ ಸಮಿತಿ ಕಾರ್ಯದರ್ಶಿ ಬಂಟರ ಲೀಲಾಧರ ರೈ ಹಾಗೂ ನಿರ್ದೇಶಕ ತನು ಅಪ್ಪಯ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!