ಸರಕಾರದ ಎಲ್ಲಾ ಸಚಿವರಿಂದ ರಾಜೀನಾಮೆ: ಸರಕಾರ ಪತನವಾಗುವುದು ಖಚಿತ?

ಬೆಂಗಳೂರು: ರಾಜಕೀಯ ಕ್ಷಿಪ್ರ ಕ್ರಾಂತಿ ಈಗ ಮತ್ತೊಂದು ಹಂತ ತಲುಪಿದ್ದು, ಜೆಡಿಎಸ್‌ –ಕಾಂಗ್ರೆಸ್‌ ಮೈತ್ರಿ ಸರಕಾರದ ಎಲ್ಲ ಸಚಿವರು ರಾಜೀನಾಮೆ ನೀಡಿದ್ದಾರೆ. ಪರಿಸ್ಥಿತಿ ಎದುರಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಪ್ರತ್ಯೇಕವಾಗಿ ಸನ್ನದ್ಧವಾಗುತ್ತಿವೆ. ಎರಡೂ ಪಕ್ಷಗಳ ಪಾಳಯದಲ್ಲಿ ಮುಂಜಾನೆಯಿಂದ ಬಿರುಸಿನ ಚಟುವಟಿಕೆಗಳು ಕಂಡು ಬಂದವು. ನಸುಕಿನವರೆಗೆ ಸರಣಿ ಸಭೆಗಳನ್ನು ನಡೆಸಿದ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ನಂತರ ಸಚಿವ ಜಿ. ಟಿ. ದೇವೇಗೌಡರಿಗೆ ತಮ್ಮ ನಿರ್ಧಾರ ತಿಳಿಸಿದ್ದರು.

‘ಬಿಜೆಪಿ ನಾಯಕರು ಆಪರೇಷನ್ ಕಮಲ ನಡೆಸಿದ್ದಾರೆ. ಎಲ್ಲರೂ ಒಗ್ಗೂಡಿ ಇರಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚಿಸಿದ್ದಾರೆ. ಕಾಂಗ್ರೆಸ್–ಜೆಡಿಎಸ್ ಪಕ್ಷದ ಹಿರಿಯ ‌ಸಚಿವರು ರಾಜೀನಾಮೆ ನೀಡುವ ಸಾಧ್ಯತೆ ‌ಇದೆ. ಜೆಡಿಎಸ್‌ ತೊರೆದಿರುವ ಶಾಸಕರ ಮನವೊಲಿಸುವ ಜವಾಬ್ದಾರಿಯನ್ನು ಕುಮಾರಸ್ವಾಮಿ ತೆಗೆದುಕೊಂಡಿದ್ದಾರೆ. ಅಗತ್ಯ ಬಿದ್ದರೆ ಜೆಡಿಎಸ್ ಶಾಸಕರು ರೆಸಾರ್ಟ್‌ಗೆ ತೆರಳಲು ಚಿಂತನೆ ಮಾಡಿದ್ದೇವೆ’ ಎಂದು ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.


‘ರಾಜೀನಾಮೆ ನಂತರ ಪಕ್ಷದ ಶಾಸಕರೊಂದಿಗೆ ರೆಸಾರ್ಟ್‌ಗೆ ಹೋಗಬೇಕೋ? ಏನು ಮಾಡಬೇಕು? ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಕೈಗೊಳ್ಳುವ ತೀರ್ಮಾನಕ್ಕೆ ಬದ್ದವಾಗಿರಲು ಜೆಡಿಎಸ್ ಸಚಿವರು, ಶಾಸಕರು ನಿರ್ಧಾರಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.


‘ಹಿರಿಯ ನಾಯಕರ ಜೊತೆಗೂಡಿ ಎಲ್ಲರೂ ಕುಶಾಲನಗರದ ರೆಸಾರ್ಟ್‌ಗೆ ತೆರಳಲು ಇಂದು ಮುಂಜಾನೆ ನಿರ್ಧರಿಸಲಾಗಿತ್ತು. ಆದರೆ, ಈಗ ಬೇರೆ ಕಡೆ ಹೋಗಲು ತೀರ್ಮಾನಿಸಲಾಗಿದೆ’ ಎಂದು ಹೇಳಲಾಗಿದೆ.

ರಾಜ್ಯಪಾಲರಿಂದ ರಾಜಕಾರಣ: ಪರಮೇಶ್ವರ ಆರೋಪ ಮತ್ತೊಂದಡೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಕರೆದಿದ್ದ ಉಪಹಾರ ಸಭೆಯೂ ಬಿರುಸಿನ ರಾಜಕೀಯ ಚಟುವಟಿಕೆಗಳಿಗೆ ಮುನ್ನುಡಿ ಬರೆಯಿತು. ‘ಶಾಸಕರ ಕುದುರೆ ‌ವ್ಯಾಪಾರಕ್ಕೆ‌ ರಾಜ್ಯಪಾಲರು ಕುಮ್ಮಕ್ಕು ನೀಡುತ್ತಿದ್ದಾರೆ. ರಾಜೀನಾಮೆ ಕೊಡಲು ಹೋದ ಶಾಸಕರ ಜತೆ ಎರಡು ಗಂಟೆ ಚರ್ಚಿಸುವ ಅಗತ್ಯವೇನಿತ್ತು. ಇದನ್ನು ಗಮನಿಸಿದರೆ ರಾಜ್ಯಪಾಲರು ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ’ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ನೇರ ಆರೋಪ ಮಾಡಿದರು.


‘ಬಿಜೆಪಿ ನಾಯಕರು ಸತತ 6ನೇ ಬಾರಿಗೆ ಸರ್ಕಾರ ಬೀಳಿಸುವ ಪ್ರಯತ್ನ ಮಾಡಿದ್ದಾರೆ. ನಾವು ನಮ್ಮ ಶಾಸಕರ ಜತೆ ಸತತ ಸಂಪರ್ಕದಲ್ಲಿದ್ದೇವೆ. ಅವರ ಮನವೊಲಿಸುವಲ್ಲಿ ನಾವು ಸಫಲರಾಗುತ್ತೇವೆ ಎನ್ನುವ ವಿಶ್ವಾಸವಿದೆ’ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!