ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಲಿರುವ ರೆನಾಲ್ಟ್ ….!!

ಈಗಾಗಲೇ ಮಾರುತಿ ಸುಜುಕಿ ಸಂಸ್ಥೆಯು ಅಧಿಕೃತವಾಗಿಯೇ ಕಡಿಮೆ ಸಾಮಾರ್ಥ್ಯದ ಡೀಸೆಲ್ ಎಂಜಿನ್‌ ಕಾರುಗಳ ಮಾರಾಟವನ್ನು 2020ರ ಏಪ್ರಿಲ್‌ನಿಂದ ಬಂದ್ ಮಾಡುವುದಾಗಿ ಹೇಳಿಕೊಂಡಿದ್ದು, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದೆ.

ರೆನಾಲ್ಟ್, ಮಾರುತಿ ಸುಜುಕಿ ಸೇರಿದಂತೆ ಹಲವು ಕಾರು ಉತ್ಪಾದನಾ ಸಂಸ್ಥೆಗಳು ತಮ್ಮ ಜನಪ್ರಿಯ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಕೈಬಿಟ್ಟು ಪೆಟ್ರೋಲ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳ ಉತ್ಪಾದನೆಯತ್ತ ಹೆಚ್ಚಿನ ಗಮನಹರಿಸಲು ಮುಂದಾಗಿವೆ.

ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಗೆ ತಗ್ಗಿಸುವ ಉದ್ದೇಶದಿಂದ ಆಟೋ ಉದ್ಯಮದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ರೆನಾಲ್ಟ್ ಸೇರಿದಂತೆ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು 2020ರಿಂದಲೇ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸುವ ಸುಳಿವು ನೀಡಿವೆ. ಡೀಸೆಲ್ ಎಂಜಿನ್ ವಾಹನಗಳು ಮಾಲಿನ್ಯ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ ಜಾರಿಗೆ ಬರಲಿರುವ ಬಿಎಸ್-6 (ಭಾರತ್ ಸ್ಟೇಜ್) ನಿಯಮವು ಕಡಿಮೆ ಸಾಮಾರ್ಥ್ಯದ ಡೀಸೆಲ್ ಎಂಜಿನ್ ಉತ್ಪಾದನೆಗೆ ಬ್ರೇಕ್ ಹಾಕಲಿದೆ.

2020ರ ಎಪ್ರಿಲ್ 1ರಿಂದ ಬಿಎಸ್-6 ನಿಯಮ ಕಡ್ಡಾಯವಾಗಿ ಬರುತ್ತಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹಲವು ಕಾರು ಮಾದರಿಗಳು ಮಾರಾಟದಿಂದ ಸ್ಥಗಿತಗೊಳ್ಳಲಿವೆ. ಹೊಸ ನಿಯಮದಿಂದಾಗಿ ಎಂಜಿನ್ ತಂತ್ರಜ್ಞಾನ ಮತ್ತು ಪ್ರಯಾಣಿಕರ ಸುರಕ್ಷತೆ ಮಹತ್ವದ ಬದಲಾವಣೆಗಳಾಲಿದ್ದು, ಹೊಸ ನಿಯಮ ಅಳವಡಿಕೆ ಸಾಧ್ಯವಿಲ್ಲದ ಕಾರುಗಳು ಮಾರಾಟದಿಂದ ಸ್ಥಗಿತಗೊಳ್ಳಲಿವೆ.

ಇದೀಗ ರೆನಾಲ್ಟ್ ಕೂಡಾ ಡೀಸೆಲ್ ಎಂಜಿನ್ ಕಾರುಗಳ ಮಾರಾಟಕ್ಕೆ ಗುಡ್‌ಬೈ ಹೇಳುವ ಮುನ್ಸೂಚನೆ ನೀಡಿದ್ದು, ಕಳೆದ ವಾರವಷ್ಟೇ ಬಿಡುಗಡೆಗೊಳಿಸಲಾದ ಟ್ರೈಬರ್ ಎಂಪಿವಿ ಕಾರಿನಲ್ಲೂ ಸಹ ಪೆಟ್ರೋಲ್ ಹೊರತುಪಡಿಸಿ ಡೀಸೆಲ್ ಎಂಜಿನ್ ಆಯ್ಕೆಯನ್ನು ಕೈಬಿಟ್ಟಿರುವುದು ಇದೇ ಕಾರಣಕ್ಕೆ. ಹಾಗೆಯೇ ಮುಂಬರುವ ದಿನಗಳಲ್ಲಿ ಬಿಡುಗಡೆಗೆ ಸಜ್ಜಾಗುತ್ತಿರುವ ನೆಕ್ಸ್ಟ್ ಜನರೇಷನ್ ಡಸ್ಟರ್ ಆವೃತ್ತಿಗಳಲ್ಲೂ ಡೀಸೆಲ್ ಎಂಜಿನ್ ಆಯ್ಕೆಗಳನ್ನು ತಗ್ಗಿಸಿ ಪೆಟ್ರೋಲ್ ಮತ್ತು ಹೈಬ್ರಿಡ್ ಆವೃತ್ತಿಗಳ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಲಿದೆ.

ಒಂದು ವೇಳೆ ಸದ್ಯ ಮಾರುಕಟ್ಟೆಯಲ್ಲಿರುವ ಬಿಎಸ್-4 ಡೀಸೆಲ್ ಎಂಜಿನ್‌ಗಳನ್ನು ಬಿಎಸ್-6 ನಿಯಮಕ್ಕೆ ಉನ್ನತಿಕರಿಸಿದರೂ ಸಹ ಕಾರಿನ ಬೆಲೆಗಳು ಕನಿಷ್ಠ ರೂ. 1.50 ರಿಂದ ರೂ.2 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿವೆ.

ಬಿಎಸ್-6 ನಿಯಮದಿಂದಾಗಿ ಚಾಲ್ತಿಯಲ್ಲಿರುವ ಬಿಎಸ್-4 ವಾಹನಗಳ ಉತ್ಪಾದನೆ ಮತ್ತು ಮಾರಾಟವು ಸಂಪೂರ್ಣವಾಗಿ ಬಂದ್ ಆಗಲಿದೆ. ಹೀಗಾಗಿ ಬಿಎಸ್-6 ನಿಯಮಕ್ಕೆ ಅನುಗುಣವಾಗಿ ಉನ್ನತಿಕರಣ ಸಾಧ್ಯವಿಲ್ಲದ ಡೀಸೆಲ್ ಎಂಜಿನ್‌ಗಳನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ.

Leave a Reply

Your email address will not be published. Required fields are marked *

error: Content is protected !!