ಜೀವರಕ್ಷಕ ವ್ಯವಸ್ಥೆಯೊಂದಿಗೆ ಪೇಜಾವರ ಶ್ರೀಗಳನ್ನು ನಾಳೆ ಮಠಕ್ಕೆ ಸ್ಥಳಾಂತರ
ಉಡುಪಿ: ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಭಾನುವಾರ ಮಠಕ್ಕೆ ಸ್ಥಳಾಂತರ ಮಾಡಲಾಗುತ್ತದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಶ್ರೀಗಳ ಆರೋಗ್ಯ ಕ್ಷೀಣವಾಗುತ್ತಿದ್ದು, ಚೇತರಿಕೆಯ ಯಾವ ಲಕ್ಷಣ ಕಾಣುತ್ತಿಲ್ಲ. ಶ್ರೀಗಳನ್ನು ನಾಳೆ ಮಠಕ್ಕೆ ಸ್ಥಳಾಂತರ ಮಾಡುತ್ತೇವೆ. ಶ್ರೀಗಳ ಅಂತಿಮ ಆಸೆಯೂ ಅದೇ ಆಗಿತ್ತು. ವೈದ್ಯರನ್ನೊಳಗೊಂಡ ವೆಂಟಿಲೇಟರ್ ವ್ಯವಸ್ಥೆ ಮಠದಲ್ಲೇ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಆಸ್ಪತ್ರೆಯವರ ಕೆಲ ಕಾರ್ಯವಿಧಾನಗಳು ಬಾಕಿಯಿದೆ. ತಯಾರಿ ನೋಡಿಕೊಂಡು ಮುಂದಿನ ಕ್ರಮ ಮಾಡುತ್ತೇವೆ. ಪೇಜಾವರ ಮಠಕ್ಕೆ ಭಕ್ತರ ಭೇಟಿ ಸದ್ಯ ಬೇಡ. ಎಲ್ಲರೂ ಇದ್ದಲ್ಲಿಂದ ಗುರುಗಳ ಆರೋಗ್ಯಕ್ಕಾಗಿ ಪ್ರಾರ್ಥಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪೂರ್ಣ ಸಹಕಾರ ಸಿಗುವ ವಿಶ್ವಾಸವಿದೆ ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಕಳೆದ ರಾತ್ರಿ ಎಂಆರ್‍ಐ ಸ್ಕ್ಯಾನ್‍ಗೆ ಒಳಪಡಿಸಲಾಗಿದೆ. ಕಳೆದ ಒಂಬತ್ತು ದಿನಗಳಿಂದ ಬೆಂಗಳೂರಿನಿಂದ ಆಗಮಿಸಿರುವ ಇಬ್ಬರು ತಜ್ಞ ವೈದ್ಯರು ಮತ್ತು ಕೆಎಂಸಿಯ ಏಳು ವೈದ್ಯರ ತಂಡ ಪೇಜಾವರಶ್ರೀಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಭೇಟಿನೀಡಿ ಮಾತನಾಡಿ, ಶ್ರೀಗಳಲ್ಲಿನ ಮಗುವಿನಂತಹ ಮುಗ್ಧತೆ, ಅದಮ್ಯ ಚೇತನ್ಯ ಎಲ್ಲರನ್ನೂ ಬೆರಗುಗೊಳಿಸುವಂಥದ್ದು. ಸ್ವಾಮೀಜಿ ಮತ್ತಷ್ಟು ಧರ್ಮದ ಕೆಲಸ ಮಾಡಬೇಕು ಎಂದರು.
ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡಿ, ಸ್ವಾಮೀಜಿ ಹಾಸಿಗೆ ಹಿಡಿದವರಲ್ಲ. ಎಲ್ಲ ಧರ್ಮ, ಜಾತಿಗೆ ಬೇಕಾಗಿದ್ದು, ಬೇಗ ಚೇತರಿಸಿಕೊಳ್ಳಲಿ. ರಾಮಮಂದಿರ ನಿರ್ಮಾಣ ಕಾಲದಲ್ಲಿ ಶ್ರೀಗಳು ಇರಬೇಕು ಎಂದರು.
ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಮಾತನಾಡಿ, ದೇವರ ಅನುಗ್ರಹದಿಂದ ಚೇತರಿಕೆಯಾಗುವ ನಿರೀಕ್ಷೆಯಿದೆ ಎಂದರು.
‘ಬೀಚ್ ಉತ್ಸವ ಮುಂದೂಡಿಕೆ’
ಪೇಜಾವರ ಶ್ರೀಗಳ ಆರೋಗ್ಯ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಡಿ.29ರಿಂದ 31ರವರೆಗೆ ಮಲ್ಪೆ ಬೀಚ್‌ನಲ್ಲಿ ಆಯೋಜಿಸಲಾಗಿದ್ದು ಬೀಚ್ ಉತ್ಸವವನ್ನು ಮುಂದೂಡಲಾಗಿದೆ. ಜತೆಗೆ, ಭಾನುವಾರ ಬೆಳಿಗ್ಗೆ ಮಲ್ಪೆ ಬೀಚ್‌ನಲ್ಲಿ ನಡೆಯಬೇಕಿದ್ದ ‘ವಿಶ್ವಮಾನವ ದಿನಾಚರಣೆ’ಯನ್ನೂ ಮುಂದೂಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.